ಮಂಗಳೂರು: ದಸರಾ ಹಿನ್ನೆಲೆಯಲ್ಲಿ ಲಾಡ್ಜ್ ನಲ್ಲಿ ಗುಂಡು ಪಾರ್ಟಿ ಮಾಡುತ್ತಿದ್ದ ವೇಳೆ ನಡೆದ ಕ್ಷುಲ್ಲಕ ವಾಗ್ವಾದ ಓರ್ವನ ಕೊಲೆಯಿಂದ ಅಂತ್ಯಗೊಂಡ ಘಟನೆ ಮಂಗಳೂರಿನ ಪಂಪ್ವೆಲ್ ಬಳಿಯ ಸಾಯಿ ಪ್ಯಾಲೇಸ್ ಲಾಡ್ಜ್ನಲ್ಲಿ ನಡೆದಿದೆ.
ನಗರದ ಪಚ್ಚನಾಡಿ ನಿವಾಸಿ ಧನುಷ್ ಮೃತಪಟ್ಟ ದುರ್ದೈವಿ. ಸುರತ್ಕಲ್ ನಿವಾಸಿ ಜೇಸನ್ ಚೂರಿಯಿಂದ ಇರಿದು ಕೊಲೆಗೈದ ಆರೋಪಿ. ದಸರಾ ಅಂತಿಮವಾಗಿರುವ ಹಿನ್ನೆಲೆಯಲ್ಲಿ ಅ.15ರಂದು ಪ್ರಮೀತ್, ಜೇಸನ್, ಕಾರ್ತಿಕ್, ಧನುಷ್, ದುರ್ಗೇಶ್ ಮತ್ತು ಪ್ರಜ್ವಲ್ ಎಂಬ ಆರು ಮಂದಿ ಗೆಳೆಯರ ತಂಡವು ನಗರದ ಪಂಪ್ವೆಲ್ ಬಳಿಯ ಸಾಯಿ ಪ್ಯಾಲೇಸ್ ಲಾಡ್ಜ್ನಲ್ಲಿ ಗುಂಡು ಪಾರ್ಟಿ ನಡೆಸಿದೆ.
ತಡರಾತ್ರಿ 2 ಗಂಟೆ ಸುಮಾರಿಗೆ ಯಾವುದೋ ಕಾರಣಕ್ಕೆ ಜೇಸನ್ ಸುರತ್ಕಲ್ ಮತ್ತು ಧನುಷ್ ಪಚ್ಚನಾಡಿ ನಡುವೆ ವಾಗ್ವಾದ ಉಂಟಾಗಿದೆ. ಈ ವಾಗ್ವಾದ ಜಗಳಕ್ಕೆ ಕಾರಣವಾಗಿ ಜೇಸನ್ ಹರಿತವಾದ ಆಯುಧದಿಂದ ಧನುಷ್ಗೆ ಚುಚ್ಚಿದ್ದಾನೆ ಎನ್ನಲಾಗಿದೆ.
ಪರಿಣಾಮ ಧನುಷ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಆತ ದಾರಿ ಮಧ್ಯೆಯೇ ಮೃತಪಟ್ಟಿದ್ದಾನೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
16/10/2021 10:16 am