ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಗ್ರಾಪಂನ 2021-22ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಕಿಲ್ಪಾಡಿಯ ಬೆಥನಿ ಮೆಡಲಿನ್ ಶಾಲಾ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಸಭೆಗೆ ಪೊಲೀಸ್ ಸಹಿತ ಕೆಲವು ಇಲಾಖಾಧಿಕಾರಿಗಳ ಗೈರುಹಾಜರಿ ಬಗ್ಗೆ ಗ್ರಾಮಸ್ಥ ಜಗನ್ನಾಥ ಕರ್ಕೇರ ಅಸಮಾಧಾನ ವ್ಯಕ್ತಪಡಿಸಿದರು. "ಕಿಲ್ಪಾಡಿ ಗ್ರಾಪಂಗೆ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸರಕಾರದಿಂದ 25 ಸೆಂಟ್ಸ್ ಜಾಗ ಮಂಜೂರಾಗಿದ್ದು, ಗ್ರಾಪಂ ಕಚೇರಿ ಕಟ್ಟಡ, ಸಮಾಜ ಭವನ, ಗ್ರಂಥಾಲಯ ಸಹಿತ ಆರ್ಥಿಕ ಸಬಲೀಕರಣಕ್ಕಾಗಿ ವಾಣಿಜ್ಯ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ. ಕಡಿಮೆ ಅನುದಾನದ ಗ್ರಾಪಂಗೆ ಸಂಸದರು, ಶಾಸಕರು, ನಾನಾ ಜನಪ್ರತಿನಿಧಿಗಳ ಮೂಲಕ ಅನುದಾನ ಒಟ್ಟುಗೂಡಿಸಿ ಕಟ್ಟಡ ನಿರ್ಮಿಸಲಾಗುವುದು" ಎಂದು ಪಂ. ಉಪಾಧ್ಯಕ್ಷ ಗೋಪಿನಾಥ ಪಡಂಗ ತಿಳಿಸಿದರು.
ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ 40 ಸೆಂಟ್ಸ್ ಜಾಗ ಮಂಜೂರು ಹಂತದಲ್ಲಿದ್ದು, ಘಟಕ ಕಾಮಗಾರಿ ಶೀಘ್ರ ನಡೆಯಲಿದೆ ಎಂದರು.
"ಓದೆಂಬ ಬೆಳಕು" ಕಿಲ್ಪಾಡಿಯಲ್ಲಿ ಬುಧವಾರದಿಂದ ಪ್ರತಿದಿನ ಸಂಜೆ 6 ರಿಂದ 7ರ ವರೆಗೆ ನಡೆಯಲಿದ್ದು, ಓದಿನ ಕಡೆಗೆ ಗಮನ ಹರಿಸುವಂತಾಗಲು ಗ್ರಾಮಸ್ಥರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪಿಡಿಒ ಪೂರ್ಣಿಮಾ ಮನವಿ ಮಾಡಿದರು.
ನಾನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.
ಪೇಪರ್ ಸೀಡ್ ಸಂಸ್ಥೆಯ ನಿತಿನ್ ವಾಸ್, ಸಾಹಸ್ ಸಂಸ್ಥೆಯ ಪವಿತ್ರಾ ಸ್ವಚ್ಛತೆ ಮತ್ತು ಕಸ ವಿಲೇವಾರಿ ಬಗ್ಗೆ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹದ ರಾಜೇಶ್ ನೋಡಲ್ ಅಧಿಕಾರಿಯಾಗಿದ್ದರು.
Kshetra Samachara
12/10/2021 06:19 pm