ಉಡುಪಿ: ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗಲೂ ಒಮ್ಮಿಂದೊಮ್ಮೆಲೇ ಧಾರಾಕಾರ ಮಳೆ ಸುರಿಯುತ್ತಲೇ ಇದೆ. ಉಡುಪಿ ಜಿಲ್ಲೆ ಸುಸಜ್ಜಿತ ರಸ್ತೆಗಳಿಗೆ ಹೆಸರುವಾಸಿ. ಆದರೆ ಮಳೆಗಾಲ ಬಂತೆಂದರೆ ನಗರದ ರೈಲ್ವೆ ಬ್ರಿಜ್, ಪರ್ಕಳದ ರಾಷ್ಟ್ರೀಯ ಹೆದ್ದಾರಿ ಹೊಂಡ ಗುಂಡಿ ಆಗಿಬಿಡುತ್ತದೆ. ಈ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟ. ಇದೀಗ ರಸ್ತೆ ದುರವಸ್ಥೆ ಬಗ್ಗೆ ಯಕ್ಷಗಾನ ಶೈಲಿಯಲ್ಲಿ ಹಾಡಿರುವ ಒಂದು ಹಾಡು ಸಖತ್ ವೈರಲ್ ಆಗುತ್ತಿದೆ. ಅಯ್ಯೋ ಅಕಟಕಟಾ ಎಂದು ರೋದಿಸುತ್ತಿರುವ ಆಡಿಯೋ ಮೂಲಕ ಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ರೈಲ್ವೆ ಬ್ರಿಡ್ಜ್ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೇ ಇರುವುದಕ್ಕೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ರೋಸಿ ಹೋದ ಜನ ತಾವೇ ಸ್ವತಃ ಮಣ್ಣುಹಾಕಿ ರಸ್ತೆ ರಿಪೇರಿ ಮಾಡುತ್ತಿದ್ದಾರೆ. ಈ ಮಧ್ಯೆ ಜನರ ಆಕ್ರೋಶದ ಪ್ರತೀಕದಂತಿರುವ ಯಕ್ಷಗಾನ ಭಾಗವತಿಕೆಯ ಹಾಡು ಸಖತ್ ವೈರಲ್ ಆಗುತ್ತಿದೆ.
Kshetra Samachara
01/10/2021 03:15 pm