ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2021 22 ನೇ ಸಾಲಿನ ಗ್ರಾಮ ಸಭೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಗ್ರಾಮಸಭೆ ಶುರುವಾಗುವಾಗಲೇ ಗ್ರಾಮಸ್ಥರು ಸಭೆಗೆ ಗಣಿ ಇಲಾಖೆ ಸಹಿತ ಇತರೆ ಅಧಿಕಾರಿಗಳ ಗೈರು ಹಾಜರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಪಂಚಾಯತ ಅಧ್ಯಕ್ಷ ಮನೋಹರ್ ಕೋಟ್ಯಾನ್ ಹಾಗೂ ಸದಸ್ಯ ದಯಾನಂದ ಮಟ್ಟು ನಡುವೆ ಮಾತಿನ ಚಕಮಕಿ ನಡೆಯಿತು. ಆಗ ನೋಡಲ್ ಅಧಿಕಾರಿ ಜಿ. ಉಸ್ಮಾನ್ ಪರಿಸ್ಥಿತಿ ತಿಳಿಗೊಳಿಸಿದರು
ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಮಟ್ಟು ಎಂಬಲ್ಲಿ ಶಾಂಭವಿ ನದಿಯಿಂದ ನಡೆಯುತ್ತಿರುವ ಮರಳುಗಾರಿಕೆಯಿಂದ ರಸ್ತೆಗಳು ತೀರಾ ಕೆಟ್ಟುಹೋಗಿದ್ದು ವಾಹನ ಸಂಚರಿಸಲು ಬಿಡಿ ನಡೆದಾಡಲೂ ಅನುಕೂಲವಾಗಿದೆ ಎಂದು ಗ್ರಾಮಸ್ಥ ಸಚಿನ್ ಮಟ್ಟು ಆಕ್ರೋಶ ವ್ಯಕ್ತಪಡಿಸಿ ಸಭೆಯಲ್ಲಿ ಮರಳುಗಾರಿಕೆ ನಿಷೇಧ ನಿರ್ಣಯ ಮಾಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಬೆಂಬಲ ಸೂಚಿಸಿದ ಪಂಚಾಯತ್ ಸದಸ್ಯ ದಯಾನಂದ ಮಟ್ಟು ಮಾತನಾಡಿ ಮಟ್ಟು ಗ್ರಾಮದಲ್ಲಿ ಸ್ಥಳೀಯ ನಿವಾಸಿ ಸಾಧು ಅಂಚನ್ ಎಂಬವರ ಮನೆಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಉತ್ತರ ಭಾರತದ ಕೆಲ ಅನಾಮಧೇಯ ಕೂಲಿಕಾರ್ಮಿಕರು ಕಳೆದ ಕೆಲವು ತಿಂಗಳಿನಿಂದ ನೆಲೆಸಿದ್ದು ಕೋವಿಡ್ ಸಂಕಷ್ಟದ ದಿನಗಳಲ್ಲಿ ಪರಿಸರ ಗಲೀಜು ಮಯ ಹಾಗೂ ಭಯಭೀತ ವಾತಾವರಣ ಸೃಷ್ಟಿಯಾಗಿದೆ, ಮತ್ತು ಪ್ರದೇಶದಲ್ಲಿ ಮರಳುಗಾರಿಕೆ ನಡೆಸಲು ಆತನೇ ಕಾರಣ ಎಂದು ನೇರ ಆರೋಪ ಮಾಡಿದರು.ಅದಕ್ಕೆ ಇತರ ಗ್ರಾಮಸ್ಥರು ದನಿಗೂಡಿಸಿ ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಭೆಗೆ ಬಂದ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಗ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿದ್ದ ಸಾಧು ಅಂಚನ್ ರವರ ಬಳಿ ಸ್ಪಷ್ಟನೆ ಕೇಳಿ ಕೂಡಲೇ ಉತ್ತರ ಭಾರತದ ಅನುಮಾನಾಸ್ಪದ ವ್ಯಕ್ತಿಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು.
ಗ್ರಾಮಪಂಚಾಯತ್ ವ್ಯಾಪ್ತಿಯ ಶಿಮಂತೂರು ನಲ್ಲಿ ದಾರಿದೀಪ ಅವ್ಯವಸ್ಥೆ ಬಗ್ಗೆ ಗ್ರಾಮಸ್ಥ ದಿನೇಶ್ಚಂದ್ರ ಅಜಿಲ ಪ್ರಸ್ತಾಪಿಸಿದರು. ಅಂಗರ ಗುಡ್ಡೆಯಲ್ಲಿ ರಸ್ತೆ ಬದಿಯಲ್ಲಿ ಹುಲ್ಲು ಬೆಳೆದು ಸಂಚಾರ ಅಪಾಯಕಾರಿಯಾಗಿದೆ ಇಂದು ಜೀವನ್ ಶೆಟ್ಟಿ ದೂರಿದರು.
ಮಟ್ಟು ಗ್ರಾಮಕ್ಕೆ ಲಸಿಕಾ ಶಿಬಿರ ನಡೆಸಬೇಕೆಂದು ವಿನಂತಿಸಿದರೂ ಯಾಕೆ ಮಾಡಿಲ್ಲ? ಎಂದು ದಯಾನಂದ ಮಟ್ಟು ವೈದ್ಯಾಧಿಕಾರಿ ಡಾ. ಚಿತ್ರರವರನ್ನು ಪ್ರಶ್ನಿಸಿ ಪಂಚಾಯತ್ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ರಮದಲ್ಲಿಯೂ ರಾಜಕೀಯ ಮಾಡುತ್ತಿದೆ ಎಂದು ಎಂದು ಸದಸ್ಯ ದಯಾನಂದ ಮತ್ತು ಆಕ್ರೋಶ ವ್ಯಕ್ತಪಡಿಸಿದಾಗ ಮತ್ತೆ ಮಾತಿನ ಚಕಮಕಿ ನಡೆಯಿತು.
ಸಭೆಯಲ್ಲಿ ಪಿಡಿಓ ಪ್ರತಿಭಾ ಕುಡ್ತಡ್ಕ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
30/09/2021 04:12 pm