ಮೂಡುಬಿದಿರೆ: ಬಿಜೆಪಿಯವರು ಜನಪರ ಕಾರ್ಯಗಳನ್ನು ಮಾಡಲು, ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು, ಬಡವರಿಗೆ ಅಕ್ಕಿ ನೀಡಲು, ಕೃಷಿಕರ, ಕಾರ್ಮಿಕರ ರಕ್ಷಣೆಗಾಗಿ ಗೆದ್ದು ಬಂದವರಲ್ಲ ಬದಲಾಗಿ ಅಧಿಕಾರದ ದಾಹಕ್ಕಾಗಿ ಬಂದವರು. ನಮ್ಮೆಲ್ಲರ ಧಾರ್ಮಿಕ ಶ್ರದ್ಧೆಯ ಕೇಂದ್ರಗಳಾಗಿರುವ ದೇವಾಲಯ, ಚರ್ಚು, ಮಸೀದಿ ಪ್ರಾರ್ಥನ ಮಂದಿರಗಳನ್ನು ರಕ್ಷಣೆ ಮಾಡಲಾಗದಿದ್ದರೆ ನೀವು ಅಧಿಕಾರ ಮಾಡಲು ನಾಲಯಕ್ಕು ಇದ್ದೀರಿ ಮತ್ಯಾಕೆ ನೀವು ಅಧಿಕಾರದಲ್ಲಿದ್ದೀರಿ ಕೆಳಗಿಳಿಯಿರಿ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಆಗ್ರಹಿಸಿದ್ದಾರೆ.
ಅವರು ಧಾರ್ಮಿಕ ಕೇಂದ್ರಗಳ ತೆರವು ವಿರೋಧಿಸಿ ಮೂಡುಬಿದಿರೆ ಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸಂಕಷ್ಟದಲ್ಲಿರುವ ದೇಶದ ರೈತರು, ಕಾರ್ಮಿಕರು, ಬಡವರ ಸಮಾಲೋಚಿಸಲು ಪುರುಸೊತ್ತು ಇಲ್ಲದ ಕೇಂದ್ರ ಸರ್ಕಾರವು ತಾಲಿಬಾನಿಗಳ ಜೊತೆ ಮಾತುಕತೆ ನಡೆಸುತ್ತದೆ. ಈ ಮೂಲಕ ಬಿಜೆಪಿ ಮೂರ್ಖ ಸರ್ಕಾರವೆಂದು ಸಾಬೀತು ಮಾಡಿದೆ. ತಾಲಿಬಾನ್ ಎನ್ನುವುದು ಇಸ್ಲಾಂ ಧರ್ಮವಲ್ಲ. ಬಿಜೆಪಿಯಲ್ಲಿರುವುದು ನೈಜ್ಯ ಹಿಂದುತ್ವವಲ್ಲ ಎಂದ ಅವರು ಮಂಗಳೂರಿನಲ್ಲಿ ಸಂಘಟನೆಯವನೊಬ್ಬ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಬೆದರಿಕೆಯೊಡ್ಡಿದಾಗ ಅದನ್ನು ವಿರೋಧಿಸುವ ತಾಕತ್ತು ಬಿಜೆಪಿ ನಾಯಕರಿಗಿಲ್ಲ. ಪಕ್ಷ ಬೇಧ ಮರೆತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಕ್ಷಣೆಗೆ ಕಾಂಗ್ರೆಸ್ ಸದಾ ಸಿದ್ಧ ಎಂದು ಹೇಳಿದರು.
ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಮಿಥುನ್ ರೈ ಮಾತನಾಡಿ, ಕೇಸರಿ ಶಾಲು ಬಿಜೆಪಿ ಅಸ್ತಿಯಲ್ಲ. ಕಾಂಗ್ರೆಸ್ ತೊಡುವ ಕೇಸರಿ ಶಾಲು ಸಾಮರಸ್ಯದ ಸಂಕೇತವಾದರೆ, ಬಿಜೆಪಿಯವರು ತೊಡುವ ಕೇಸರಿ ಶಾಲು ಸಂಘರ್ಷದ ಸಂಕೇತ. ಗೋವಿನ ವಿಚಾರದಲ್ಲಿ ರಾಜ್ಯ ರಾಜ್ಯಗಳ ನಡುವೆ ಬೇರೆ ಬೇರೆ ನಿಲುವುಗಳನ್ನು ಬಿಜೆಪಿ ಹೊಂದಿದೆ. ಇಡೀ ದೇಶದಲ್ಲಿ ಗೋಹತ್ಯೆ ನಿಷೇಧ ಜಾರಿ ಮಾಡಿದಲ್ಲಿ ಕಾಂಗ್ರೆಸ್‌ನಲ್ಲಿರುವ ಸರ್ವಧರ್ಮದವರು ಬೆಂಬಲಿಸುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ವಕ್ತಾರ ವಸಂತ ಬರ್ನಾಡ್, ವಿಂಟೆಕ್ ಅಧ್ಯಕ್ಷ ಉತ್ತಮ್ ಕುಮಾರ್, ಜಿ.ಪಂ ಮಾಜಿ ಸದಸ್ಯೆ ಶೈಲಾ ಸಿಕ್ವೇರ, ತಾಪಂ ಮಾಜಿ ಅಧ್ಯಕ್ಷೆ ಸವಿತಾ ಟಿ.ಎನ್, ಎಪಿಎಂಸಿ ಸದಸ್ಯ ಚಂದ್ರಹಾಸ ಸನಿಲ್, ಪ್ರವೀಣ್ ಕುಮಾರ್, ಪುರಸಭಾ ಸದಸ್ಯರಾದ ಸುರೇಶ್ ಪ್ರಭು, ಕೊರಗಪ್ಪ ಸುರೇಶ್ ಕೋಟ್ಯಾನ್, ಜೊಸ್ಸಿ ಮೆನೇಜಸ್ ಮುಖಂಡರಾದ ರಾಜೇಶ್ ಮಾರ್ನಾಡ್, ರತ್ನಾಕರ ಸಿ.ಮೊಯಿಲಿ, ರಾಘ ಪೂಜಾರಿ, ವಾಸುದೇವ ನಾಯಕ್, ಪ್ರವೀಣ್ ಶೆಟ್ಟಿ, ಸುಖಾನಂದ ಶೆಟ್ಟಿ ಉಪಸ್ಥಿತರಿದ್ದರು. ವಕ್ತಾರ ರಾಜೆಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿದರು.
Kshetra Samachara
26/09/2021 06:13 pm