ಮಂಗಳೂರು: ಕಾನೂನು ಸಮರಕ್ಕೆ ಮಣಿದ ಅದಾನಿ ಸಂಸ್ಥೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಾಕಲಾಗಿದ್ದ ಅದಾನಿ ಏರ್ಪೋರ್ಟ್ ಹೆಸರನ್ನು ತೆಗೆದು ಮತ್ತೆ ಎಲ್ಲಾ ಬೋರ್ಡ್ ಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಫಲಕವನ್ನು ಹಾಕಿದೆ. ಇದು ನಮ್ಮಕಾನೂನು ಹೋರಾಟಕ್ಕೆ ಸಂದ ಜಯ ಎಂದು ಸಾಮಾಜಿಕ ಕಾರ್ಯಕರ್ತ ದಿಲ್ ರಾಜ್ ಆಳ್ವ ಹೇಳಿದ್ದಾರೆ.
ಖಾಸಗಿ ಹೊಟೇಲ್ ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಿನ್ನೆ ಬೆಳಗ್ಗೆ ಈ ಪ್ರಕ್ರಿಯೆ ನಡೆಸಿದ್ದು, ನಮ್ಮ ಪ್ರಯತ್ನಕ್ಕೆ ಫಲ ದೊರಕಿದೆ. ಒಂದು ವೇಳೆ ಅದಾನಿ ಏರ್ಪೊರ್ಟ್ ಎಂಬ ಹೆಸರು ಹಾಗೆಯೇ ಇದ್ದಲ್ಲಿ ಮುಂದೆ ಆ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಯೇ ನಿರ್ಮಾಣ ಮಾಡಿದೆ ಎಂದು ತಪ್ಪು ಅಭಿಪ್ರಾಯ ಶಾಶ್ವತವಾಗಿ ಇರುತ್ತದೆ. ಇದರಿಂದ ಈ ವಿಮಾನ ನಿಲ್ದಾಣವನ್ನು ಮಾಡಲು ಅವಿರತ ಶ್ರಮ ವಹಿಸಿದ ಹಿರಿಯ ರಾಜಕೀಯ ಮುತ್ಸದ್ದಿಗಳ ಪ್ರಯತ್ನಕ್ಕೆ ಯಾವುದೇ ರೀತಿಯ ಮಾನ್ಯತೆ ಇಲ್ಲದಂತಾಗುತ್ತದೆ ಎಂದರು.
ಅದಾನಿ ಏರ್ಪೋರ್ಟ್ ನಾಮಕರಣದ ಬಳಿಕ ಆರ್ ಟಿಐ ಮುಖೇನ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆಗೆ ಗುತ್ತಿಗೆಯ ಒಪ್ಪಂದದ ದಾಖಲೆ ಕೇಳಿದ್ದೆ. ಇದರಲ್ಲಿ ವಿಮಾನ ನಿಲ್ದಾಣದ ಪ್ರಾಧಿಕಾರವು 'ಗುತ್ತಿಗೆ ಪಡೆದ ಸಂಸ್ಥೆಗೆ ಬ್ರ್ಯಾಂಡಿಂಗ್ ಮಾಡುವ ಅಧಿಕಾರವಿಲ್ಲ. ಈ ಬಗ್ಗೆ ನಾವು ಸ್ಪಷ್ಟ ಪಡಿಸಿದ್ದು, ನೋಟಿಸ್ ಕೂಡಾ ಜಾರಿಗೊಳಿಸಿದ್ದೇವೆ' ಎಂದು ಪತ್ರ ಮುಖೇನ ತಿಳಿಸಿತ್ತು. ಅದಾಗಿ ಒಂದು ತಿಂಗಳಲ್ಲಿ ವಿಮಾನ ನಿಲ್ದಾಣದ ಟ್ವಿಟರ್, ಎಫ್ ಬಿ ಖಾತೆಗಳಲ್ಲಿ ಅದಾನಿ ಹೆಸರನ್ನು ಅಳಿಸಲಾಗಿತ್ತು. ಇದೀಗ ವಿಮಾನ ನಿಲ್ದಾಣದ ಎಲ್ಲಾ ನಾಮ ಫಲಕಗಳಲ್ಲಿ ಅದಾನಿ ಏರ್ಪೋರ್ಟ್ ಹೆಸರನ್ನು ತೆಗೆದುಹಾಕಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ನಾಮಫಲಕವನ್ನು ಮತ್ತೆ ಹಾಕಲಾಗಿದೆ. ಇದು ಸಂತಸದ ವಿಚಾರವಾಗಿದೆ. ಅಲ್ಲದೆ ತುಳುನಾಡಿನ ಕಾರಣಿಕ ಪುರುಷರು, ಸಾಧಕರ ಹೆಸರು ಹಾಕಲು ನಮ್ಮದೇನು ಅಡ್ಡಿಯಿಲ್ಲ ಎಂದು ದಿಲ್ ರಾಜ್ ಆಳ್ವ ಸ್ಪಷ್ಟಪಡಿಸಿದರು.
Kshetra Samachara
11/09/2021 04:26 pm