ಬಜಪೆ: ಪಕ್ಷದ ರಾಜ್ಯಾಧ್ಯಕ್ಷರಾಗಿ ಎರಡು ವರುಷ ಪೂರೈಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ಸೀಯಾಳ ಸಮರ್ಪಿಸಿ, ಪ್ರಾರ್ಥಿಸಿದರು.
ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷವಸ್ತ್ರ ನೀಡಿ ಗೌರವಿಸಿದರು. ನಂತರ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕೋವಿಡ್ ಸವಾಲು ಮತ್ತು ಸಂಕಟ ಮಧ್ಯೆಯೂ ಜನರಿಗೆ ಆಹಾರ, ಆರೋಗ್ಯ ಸವಲತ್ತುಗಳನ್ನು ನೀಡುತ್ತ, ಪಕ್ಷವನ್ನೂ ಸಂಘಟಿಸಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ ಪರಿಣಾಮ ಚುನಾವಣೆಗಳನ್ನೂ ಗೆದ್ದಿದ್ದೇವೆ. ಮತಗಟ್ಟೆಯವವರೆಗೂ ಪಕ್ಷವನ್ನು ಗಟ್ಟಿಗೊಳಿಸಿದ್ದೇವೆ. ಗ್ರಾಮಸ್ವರಾಜ್ಯದ ಪರಿಕಲ್ಪನೆಯಲ್ಲಿ ಅತಿ ಹೆಚ್ಚು ಗ್ರಾಮಪಂಚಾಯತ್ ಸದಸ್ಯರನ್ನು ಪಕ್ಷ ಹೊಂದುವಂತಾಗಿದೆ. ೪೦ ವರ್ಷದ ವಯಸ್ಸಿನ ಒಳಗಿನವರಿಗೆ ಮಂಡಲಾಧ್ಯಕ್ಷತೆ, 50 ವರ್ಷದ ಒಳಗಿನವರಿಗೆ ಜಿಲ್ಲಾಧ್ಯಕ್ಷತೆಯನ್ನು ನೀಡಿ ಯುವಕರಿಗೆ ಸಂಘಟನೆಯಲ್ಲಿ ಅವಕಾಶ ನೀಡಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗಿದೆ.
ಪಕ್ಷಾಧ್ಯಕ್ಷನಾಗಿ ಎರಡು ವರ್ಷಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದೇನೆ ಎಂಬ ತೃಪ್ತಿಯಿದೆ. ಕಳೆದ ಬ್ರಹ್ಮಕಲಶ ಸಂದರ್ಭ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಮುತುವರ್ಜಿಯಲ್ಲಿ ಕಟೀಲಿನಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ನಡೆದಿದ್ದು, ದೇವಳಕ್ಕೆ ಭೇಟಿ ನೀಡುವ ಎಲ್ಲಾ ರಸ್ಥೆಗಳು ಅಭಿವೃದ್ದಿ ಕಂಡಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳು ನಡೆಯಲಿವೆ ಎಂದರು. ಈ ಸಂದರ್ಭ ಶ್ರೀಹರಿನಾರಾಯಣದಾಸ ಆಸ್ರಣ್ಣ , ಕಮಲಾದೇವಿ ಪ್ರಸಾದ್ ಆಸ್ರಣ್ಣ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕಸ್ತೂರಿ ಪಂಜ, ಈಶ್ವರ ಕಟೀಲ್, ಆದರ್ಶ ಶೆಟ್ಟಿ, ಅಭಿಲಾಷ್ ಶೆಟ್ಟಿ, ದಾಮೋದರ್ ಕೊಡೆತ್ತೂರು, ಪ್ರಕಾಶ್ ಕುಕ್ಯಾನ್, ಗುರುರಾಜ್ ಮಲ್ಲಿಗೆಯಂಗಡಿ, ಅರುಣ್ ಮಲ್ಲಿಗೆಯಂಗಡಿ ಮತ್ತಿತರರಿದ್ದರು.
Kshetra Samachara
28/08/2021 10:27 pm