ಉಡುಪಿ: ಯಾವಾಗಲೂ ಹೆಣದ ಮೇಲೆ ಜಾತಿ ರಾಜಕಾರಣ ಮಾಡುತ್ತಿದ್ದ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿಯ ಇತರ ಮಹಿಳಾ ರಾಜಕಾರಣಿಗಳು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಮೌನ ವಹಿಸಿರುವುದರ ಹಿಂದಿನ ಗುಟ್ಟೇನು ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಪ್ರಶ್ನಿಸಿದ್ದಾರೆ.
ರಾಜ್ಯದ ಯಾವುದೇ ಭಾಗದಲ್ಲಿ ಕೊಲೆ ನಡೆದರೆ ಕೂಡಲೇ ಒಡೋಡಿ ಬರುವ ಶೋಭಾ ಕರಂದ್ಲಾಜೆ ಅವರು, ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ ಜಿಲ್ಲೆಯಲ್ಲಿ ಒರ್ವ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದರೂ ಸಹ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ. ಓರ್ವ ಮಹಿಳೆಯಾಗಿ ಇನ್ನೋರ್ವ ಹೆಣ್ಣು ಮಗಳ ನೋವನ್ನು ಅರ್ಥೈಸಿಕೊಳ್ಳುವಲ್ಲಿ ಸಚಿವೆ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಪಕ್ಷದಲ್ಲಿ ಮಾತೆತ್ತಿದರೆ ಮಹಿಳೆಯರನ್ನು ಮಾತೆ, ತಾಯಿ ಎಂದು ಕರೆದು ಗೌರವಿಸುತ್ತೇವೆ ಎನ್ನುತ್ತಾರೆ. ಆದರೆ ಅವರದ್ದೇ ಅಧಿಕಾರ ಇರುವ ರಾಜ್ಯದಲ್ಲಿ ಇಡೀ ದೇಶವೇ ತಲೆ ತಗ್ಗಿಸುವಂತಹ ಘಟನೆ ನಡೆದಿದ್ದರೂ ಅಪರಾಧಿಗಳನ್ನು ಬಂಧಿಸುವಲ್ಲಿ ಸರಕಾರ ಮೀನ ಮೇಷ ಎಣಿಸುತ್ತಿದೆ.
ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ರಾಜ್ಯದಲ್ಲಿ ಕುಸಿದುಬಿದ್ದಿರುವ ಕಾನೂನು- ಸುವ್ಯವಸ್ಥೆಗೆ ಸಾಕ್ಷಿಯಾಗಿದೆ. ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ ರಾಜ್ಯದ ಗೃಹ ಸಚಿವರು ಬೇಜಾವಬ್ದಾರಿ ಹೇಳಿಕೆ ನೀಡಿ ಕೈತೊಳೆದು ಕೊಳ್ಳೂವ ಕೆಲಸ ಮಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
Kshetra Samachara
27/08/2021 10:43 am