ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ.ಇದಿನಬ್ಬರ ಪುತ್ರನ ಮನೆ ಮೇಲೆ ನಡೆದಿದ್ದ ಎನ್‌ಐಎ ದಾಳಿ ಬಳಿಕ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆಯನ್ನು ಮಾಜಿ ಸಚಿವ ಯುಟಿ. ಖಾದರ್ ಖಂಡಿಸಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದಿನಬ್ಬರ ಮೊಮ್ಮಗ ಮಡಿಕೇರಿ ಮೂಲದ ಬಂಟ ಸಮುದಾಯದ ಯುವತಿ ಮರಿಯಂ ಆಲಿಯಾಸ್ ದೀಪ್ತಿ ಮಾರ್ಲ ಎಂಬಾಕೆಯನ್ನು ವಿವಾಹವಾಗಿ ಲವ್ ಜಿಹಾದ್ ಮಾಡಿದೆ ಎಂದು ವಿಎಚ್ ಪಿ ಆರೋಪಿಸಿತ್ತು. ಆ ಯುವತಿಯ ಬಗ್ಗೆ ಕೇಳೋಕೆ ಈ ಸಂಘಟನೆಯವರು ಯಾರು..? ಅವರ ತಂದೆ ತಾಯಿ ಬಂದು ಏನಾದ್ರೂ ಪೊಲೀಸರಿಗೆ ದೂರು ನೀಡಿದ್ದಾರಾ..? ಇದು ಅವರ ಮನೆಯವರಿಗೆ ಬಿಟ್ಟ ವಿಚಾರ. ನನ್ನ ಉಳ್ಳಾಲ ಕ್ಷೇತ್ರಕ್ಕೆ ಬಂದು ಹೊರಗಿನಿಂದ ಬಂದು ಲವ್ ಜಿಹಾದ್ ಎನ್ನುವ ಅಜೆಂಡಾ ಇಟ್ಟು ಪ್ರತಿಭಟನೆ ಮಾಡುತ್ತೀರಿ. ನಿಮಗೆ ಸಾಧ್ಯ ಇದ್ರೆ ಲವ್ ಜಿಹಾದ್ ವಿರುದ್ದ ಕಾನೂನು ತರಲು ಉಪವಾಸ ಮಾಡಿ ಎಂದು ಸವಾಲೆಸೆದ್ರು. ಇವತ್ತು ಉಳ್ಳಾಲ ವ್ಯಾಪ್ತಿಯಲ್ಲಿ ಮಾತ್ರ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿಲ್ಲ. ಇಲ್ಲಿನ ಜನರು ಪರಸ್ಪರ ಭಾವೈಕ್ಯತೆ ಮತ್ತು ಪ್ರೀತಿಯಿಂದ ಬದುಕುತ್ತಿದ್ದಾರೆ. ಎನ್ ಐಎ ತನಿಖೆ ನಡೆಯುವಾಗ ಹೇಳಿಕೆ ನೀಡುವುದು ಸರಿಯಲ್ಲ. ಎನ್ ಐಎ ಬಂದಿರೋದು ಗಂಭೀರ ವಿಚಾರ. ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಈ ಬಗ್ಗೆ ರಾಜಕೀಯ ಮಾಡುವುದು ಬೇಡ ಎಂದರು.
ಇನ್ನು ಎನ್ಐಎ ತನಿಖೆಯ ಬಗ್ಗೆ ಅನಗತ್ಯವಾದ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ. ತನಿಖೆಯಿಂದ ಸತ್ಯ ಹೊರಬೀಳುತ್ತದೆ. ಅಲ್ಲಿಯವರೆಗೆ ತಾಳ್ಮೆ ವಹಿಸಬೇಕು.ಈ ನಿಟ್ಟಿನಲ್ಲಿ ತಾಳ್ಮೆ ವಹಿಸಿರುವ ಉಳ್ಳಾಲದ ಜನತೆಯನ್ನು ಅಭಿನಂದಿಸುವುದಾಗಿ ಹೇಳಿದ ಯುಟಿ ಖಾದರ್,ಉಳ್ಳಾಲದ ಜನತೆ ಸೌಹಾರ್ದತೆಯಲ್ಲಿ ಬದುಕುತ್ತಿದ್ದಾರೆ. ಅವರ ನಡುವೆ ಕೆಲವರು ಗೊಂದಲ ಸ್ರಷ್ಟಿಸುವ ಪ್ರತಿಭಟನೆ, ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಉಳ್ಳಾಲದ ಜನತೆ ಈ ಹಿಂದೆಯೂ ಭಯೋತ್ಪಾದನೆಗೆ ಬೆಂಬಲ ನೀಡಿಲ್ಲ. ಅಂತಹ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ.ಲವ್ ಜಿಹಾದ್ ಬಗ್ಗೆ ಕಾನೂನು ತರುತ್ತೇವೆ ಎಂದು ಬಿಜೆಪಿ ಹೇಳಿದೆ. ಆ ರೀತಿಯ ಕಾನೂನು ಏಕೆ ಮಾಡಲಿಲ್ಲ. ಅದನ್ನು ಜಾರಿ ಮಾಡಲು ಅವರು ಸರಕಾರವನ್ನು ಏಕೆ ಒತ್ತಾಯ ಮಾಡುತ್ತಿಲ್ಲ..? ಜನರಲ್ಲಿ ಏಕೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
Kshetra Samachara
13/08/2021 05:23 pm