ವರದಿ: ರಹೀಂ ಉಜಿರೆ
ಉಡುಪಿ; ಉಡುಪಿ ಜಿಲ್ಲೆಗೆ ಜುಲೈ ತಿಂಗಳು ಜಾಕ್ ಪಾಟ್ ಅನ್ನಬಹುದು.ಜಿಲ್ಲೆಯಲ್ಲಿ ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯದೇ ಹೋದರೂ ರಾಜಕೀಯ ಬಹುದೊಡ್ಡ ಶುಭ ಸುದ್ದಿ ಕೊಟ್ಟಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರೆ ,ಇದೇ ತಿಂಗಳಲ್ಲಿ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಕ್ಕಿದೆ. ಇನ್ನು ಐದೂ ಕಡೆ ಬಿಜೆಪಿ ಶಾಸಕರೇ ಇರುವ ಜಿಲ್ಲೆಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕೂಡ ದಟ್ಟವಾಗಿದೆ.
ಹೌದು..ಕೃಷ್ಣನಗರಿಯ ಜನ ಒಂದು ರೀತಿಯಲ್ಲಿ ಅದೃಷ್ಟವಂತರು ಎನ್ನಬಹುದು. ಒಂದೇ ತಿಂಗಳಲ್ಲಿ ಜಿಲ್ಲೆಗೆ ಜಾಕ್ ಪಾಟ್ ಹೊಡೆದಿದೆ.
ಹೀಗಾಗಿ ಉಡುಪಿ ನಾಗರಿಕರಂತೂ ಸಂತೋಷಗೊಂಡಿದ್ದಾರೆ.ಬಸವರಾಜ ಬೊಮ್ಮಾಯಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಉಡುಪಿ ಜಿಲ್ಲೆಗೆ ಬಂದದ್ದೇ ಅಪರೂಪ. ಕೇವಲ ಬೆರಳೆಣಿಕೆಯಷ್ಟೇ ಸಲ ಬಂದಿರಬಹುದು.ನೂತನ ಸಿಎಂ ಕೊಡುಗೆ ಕೂಡ ಅಷ್ಟಕಷ್ಟೇ. ಕೋವಿಡ್ ಕಾಲದಲ್ಲೂ ಜಿಲ್ಲೆಗೆ ಆಗಮಿಸಿ ಜನರೊಂದಿಗೆ ಇದ್ದು ಧೈರ್ಯ ತುಂಬಲಿಲ್ಲ ಎನ್ನುವ ಆಪಾದನೆ ಬೊಮ್ಮಾಯಿ ಮೇಲಿದೆ. ಇನ್ನು ಸಂಸದೆ ಶೋಭಾ ಕರಂದ್ಲಾಜೆಯವರು ಜಿಲ್ಲೆಗೆ ಆಗಮಿಸುವ ಅಪರೂಪದ ಅತಿಥಿಯಂತಿದ್ದರು. ಜಿಲ್ಲೆಯ ಜನರಿಗೆ ಸಂಸದೆಯನ್ನು ನೋಡುವ ಭಾಗ್ಯ ಟಿವಿಯಲ್ಲಿ ಮಾತ್ರ ಸಿಗುತ್ತಿತ್ತು.ಜಿಲ್ಲೆಯಲ್ಲಿ ಕೋವಿಡ್ ಹೆಮ್ಮಾರಿ ಆರ್ಭಟಿಸುತ್ತಿದ್ದರೂ ಜಿಲ್ಲೆಯಿಂದ ದೂರ ಉಳಿದು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು ಎಂದು ಜನರಿಂದ ಟ್ರೋಲ್‌ಗೆ ಒಳಗಾಗಿದ್ದರು.
ಅಂದಹಾಗೆ ಉಡುಪಿಯ ನೆಲ ಒಂದು ರೀತಿಯಲ್ಲಿ ರಾಜಕಾರಣಿಗಳಿಗೆ ಲಕ್ ಅಂತ ಹೇಳಬಹುದು. ಕೆಕೆ ಪೈ, ಆಸ್ಕರ್ ಪೆರ್ನಾಂಡಿಸ್, ವಿಎಸ್ ಆಚಾರ್ಯ ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಪ್ರಮೋದ್ ಮಧ್ವರಾಜ್ ಹೀಗೆ ಹಲವು ಜನ ಪ್ರತಿನಿಧಿಗಳು ಕೇಂದ್ರ ಹಾಗೂ ರಾಜ್ಯದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಆದರೆ ಉನ್ನತ ಸ್ಥಾನ ಸಿಕ್ಕಿದಾಗ ಉಡುಪಿಯನ್ನು ಮರೆಯಬಾರದು, ಜಿಲ್ಲೆಯ ಜನರಿಗೆ ಒಳ್ಳೆಯ ಕೊಡುಗೆ ನೀಡಬೇಕು ಎನ್ನುತ್ತಾರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು.
ರಾಜಕೀಯವಾಗಿ ಉಡುಪಿ ಅಷ್ಟಾಗಿ ಸದ್ದು ಮಾಡದೇ ಇದ್ದರೂ ರಾಜಕಾರಣಿಗಳಿಗೆ ಲಕ್ಕಿ ಪ್ಲೇಸ್ ಉಡುಪಿ. ಸದ್ಯ ಬೊಮ್ಮಾಯಿ ಹಾಗೂ ಶೋಭಾ ಅವರಿಗೆ ಉಡುಪಿ ಅಭಿವೃದ್ಧಿ ಮಾಡಲು ಒಳ್ಳೆಯ ಅವಕಾಶ ಇದೆ, ಇದನ್ನು ಸದುಪಯೋಗಪಡಿಸಿ ಉಡುಪಿ ಜನ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಅಭಿವೃದ್ಧಿ ಕಾರ್ಯ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.
Kshetra Samachara
28/07/2021 07:23 pm