ಕುಂದಾಪುರ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ಜನವಿರೋಧಿ ನಿಲುವಿನ ವಿರುದ್ಧ ಹೆಜಮಾಡಿಯಿಂದ ಬೈಂದೂರು ವರೆಗೆ ನಡೆಯುತ್ತಿರುವ ಜನಧ್ವನಿ ಪಾದಯಾತ್ರೆ ಫೆ.25ರಂದು ಸಂಜೆ ಕುಂದಾಪುರ ತಲುಪಿತು.
ಇಂದು ಮಧ್ಯಾಹ್ನ ಸಾಲಿಗ್ರಾಮದಿಂದ ಹೊರಟ ಪಾದಯಾತ್ರೆ ಕೋಟ, ತೆಕ್ಕಟ್ಟೆ ಮೂಲಕ ಕುಂದಾಪುರ ತಲುಪಿದೆ. ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಪಾದಯಾತ್ರೆಯನ್ನುದ್ದೇಶಿಸಿ ಕಾಂಗ್ರೆಸ್ ಮುಖಂಡರಾದ ಸುಧೀರ್ ಕುಮಾರ್ ಮರವಳ್ಳಿ ಮಾತನಾಡಿ, ಪಾದಯಾತ್ರೆಯ ಉದ್ದೇಶ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕೇಂದ್ರ ಸರ್ಕಾರ ರೈತರ ಬೇಡಿಕೆ, ನಿರಂತರ ನಡೆಯುತ್ತಿರುವ ಚಳವಳಿ ಲೆಕ್ಕಿಸದೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಬಡವರಿಗೆ ಅಕ್ರಮ ಸಕ್ರಮದ ಮೂಲಕ ಭೂಮಿ ನೀಡುವ ಕೆಲಸ ಮಾಡಿತ್ತು. ಆದರೆ, ಈ ಸರ್ಕಾರ ಸರ್ಕಾರಿ ಭೂಮಿಯಲ್ಲಿ ಕುಳಿತವರ ಮೇಲೂ ಕೇಸು ಹಾಕಲು ಮುಂದಾಗುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರುತ್ತಲೇ ಇದೆ. ಗ್ಯಾಸ್ ಸಬ್ಸಿಡಿ ತೆಗೆದು ಹಾಕಲಾಗಿದೆ. ದಿನಬಳಕೆಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣವಾಗುತ್ತಿದೆ. ಕೊರೊನಾ ಬಿಕ್ಕಟ್ಟಿನಲ್ಲಿಯೂ ವಿಪರೀತ ಬೆಲೆ ಏರಿಕೆಯ ಹೊಡೆತ ಜನತೆಗೆ ಈ ಸರ್ಕಾರಗಳು ನೀಡುತ್ತಿವೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಶಂಕರ್ ಕುಂದರ್, ಎಂ.ಎ. ಗಫೂರ್,ಅಶೋಕ್ ಪೂಜಾರಿ,ಚಂದ್ರಶೇಖರ್ ಖಾರ್ವಿ ಪುರಸಭೆ ಸದಸ್ಯರು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಒಲಿವೇರ, ವರೋನಿಕಾ ಕರ್ವೇಲ್ಲೊ, ದೇವಾನಂದ ಶೆಟ್ಟಿ, ಚಂದ್ರಶೇಖರ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.ಈ ಸಂದರ್ಭ 'ರೈತರ ಭದ್ರತೆ- ದೇಶದ ಭದ್ರತೆ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
Kshetra Samachara
26/02/2021 12:56 pm