ಮಂಗಳೂರು: ಕೊಟ್ಪಾ ಕಾಯ್ದೆಯನ್ನು ವರ್ಷದಿಂದ ವರ್ಷಕ್ಕೆ ಕಠಿಣಗೊಳಿಸಲಾಗುತ್ತಿದ್ದು, ಇದು ನಾಲ್ಕು ಕೋಟಿಗಳಷ್ಟು ಉದ್ಯೋಗ ಸೃಷ್ಟಿಸಿರುವ ಬೀಡಿ ಉದ್ಯಮಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಸಿಐಟಿಯು ಅಧ್ಯಕ್ಷ ವಸಂತ ಆಚಾರಿ ಹೇಳಿದರು.
ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರ ಕೊಟ್ಪಾ ಕಾಯ್ದೆಯನ್ನು ಜಾರಿಗೆ ತಂದು ನಿಧಾನವಾಗಿ ಬೀಡಿ ಉದ್ಯಮವನ್ನು ನಾಶಗೊಳಿಸುವ ಕಾರ್ಯ ಮಾಡುತ್ತಿದೆ. ಇದೀಗ ಮತ್ತೆ ಕೊಟ್ಪಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರ ಬಗ್ಗೆ ಕಾಳಜಿಯೇ ಇಲ್ಲದಂತೆ ವರ್ತಿಸುತ್ತಿವೆ. ಇದಕ್ಕೆ ಪ್ರತಿರೋಧ ಒಡ್ಡುವ ರೀತಿಯಲ್ಲಿ ಜಿಲ್ಲೆಯ ಸಂಸದರು, ಶಾಸಕರು ಕೆಲಸ ಮಾಡಬೇಕಿದೆ ಎಂದರು.
ಕೊಟ್ಪಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲೆಯ ನಾಲ್ಕು ಸಂಘಟನೆಗಳು ಹಾಗೂ ಗುತ್ತಿಗೆದಾರರ ಸಂಘಟನೆಗಳು ಜಂಟಿಯಾಗಿ ಫೆ.25 ರಂದು ಪ್ರತಿಭಟನಾ ಸಭೆ ಆಯೋಜಿಸಿದೆ. ಅಂದು ಬೆಳಗ್ಗೆ 10.30ಕ್ಕೆ ಬಲ್ಮಠದ ಅಂಬೇಡ್ಕರ್ ವೃತ್ತದಿಂದ ಬೃಹತ್ ಮೆರವಣಿಗೆ ನಡೆಯಲಿದೆ. ಮೆರವಣಿಗೆ ನೆಹರೂ ಮೈದಾನದವರೆಗೆ ಸಾಗಿ ಅಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಸಭೆ ಜರುಗಲಿದೆ ಎಂದು ವಸಂತ ಆಚಾರಿ ಹೇಳಿದರು.
Kshetra Samachara
18/02/2021 07:06 pm