ಮುಲ್ಕಿ: ಮುಲ್ಕಿಯ ಪ್ರತಿಷ್ಠಿತ ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಭಿನ್ನಮತದ ನಡುವೆಯೂ ಈ ಗಾದಿಗೆ ಅವಿರೋಧ ಆಯ್ಕೆಯಾಗಿದೆ.
ಸರಕಾರದ ಮೀಸಲಾತಿ ನಿಯಮಾವಳಿ ಪ್ರಕಾರ ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದ್ದು, ಅಧ್ಯಕ್ಷರಾಗಿ ಮನೋಹರ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎಸ್ಸಿ ಮಹಿಳೆ ಮೀಸಲಾತಿ ಅನ್ವಯ ಶಶಿಕಲಾ ಆಯ್ಕೆಯಾಗಿದ್ದಾರೆ.
ಈ ಗ್ರಾಪಂನ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 9 ಸ್ಥಾನ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕೇವಲ ಒಂದು ಸ್ಥಾನ ಗಳಿಸಿದ್ದರು.
ಈ ನಡುವೆ ಪಂಚಾಯಿತಿ ಅಧ್ಯಕ್ಷ ಪಟ್ಟಕ್ಕೇರಲು ಬಿಜೆಪಿಯೊಳಗೆ ತೆರೆಮರೆ ಚಟುವಟಿಕೆ ನಡೆದಿದ್ದು, ಹಲವು ವರ್ಷಗಳಿಂದ ಪಕ್ಷದಲ್ಲಿದ್ದು ನಿಷ್ಠಾವಂತ ಕಾರ್ಯಕರ್ತರಾದ ಕೃಷ್ಣ ಅಂಗರಗುಡ್ಡೆ ಹಾಗೂ ಚುನಾವಣೆ ಸಮಯ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಮನೋಹರ ಕೋಟ್ಯಾನ್ ನಡುವೆ ತೆರೆಮರೆಯಲ್ಲಿ ಸ್ಪರ್ಧೆ ನಡೆದಿದ್ದು, ಕಲ್ಲಡ್ಕ ಹೈಕಮಾಂಡ್ ವರೆಗೂ ತಲುಪಿತ್ತು. ಇಬ್ಬರೂ ಪಟ್ಟು ಸಡಿಲಿಸದ ಕಾರಣ ಬಿಜೆಪಿ ವರಿಷ್ಠರಿಗೆ ಆಯ್ಕೆ ಕಗ್ಗಂಟಾಗಿತ್ತು. ಆದರೆ, ಇಂದು ನಾಮಪತ್ರ ಸಲ್ಲಿಸುವ ವೇಳೆ ಮನೋಹರ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದು, ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಹುದ್ದೆಗೆ ಸ್ಪರ್ಧೆಯಲ್ಲಿದ್ದ ಕೃಷ್ಣ ಅಂಗರಗುಡ್ಡೆ ನಾಟಕೀಯ ಬೆಳವಣಿಗೆಯಲ್ಲಿ ಮಧ್ಯಾಹ್ನ12 ಗಂಟೆಗೆ ಪಂಚಾಯಿತಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸುವಾಗ ಸೂಚಕರು ಇಲ್ಲದೆ ಆಕ್ರೋಶಗೊಂಡು ಹಿಂದಿರುಗಿದ್ದಾರೆ ಎನ್ನಲಾಗಿದೆ. ಉಪಾಧ್ಯಕ್ಷರಾಗಿ ಎಸ್ಸಿ ಮೀಸಲಾತಿಯನ್ವಯ ಶಶಿಕಲಾ ನಾಮಪತ್ರ ಸಲ್ಲಿಸಿದ್ದು, ಪ್ರತಿಪಕ್ಷ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಉಷಾ ಉಪಾಧ್ಯಕ್ಷರ ಆಯ್ಕೆ ಘೋಷಿಸಿದರು.
ಈ ಸಂದರ್ಭ ಅಧ್ಯಕ್ಷ ಮನೋಹರ ಕೋಟ್ಯಾನ್ ಮಾತನಾಡಿ, ಪಂಚಾಯಿತಿಗೆ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಬಳಿಕ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭ ತಾಪಂ ಸದಸ್ಯ ಶರತ್ ಕುಬೆವೂರು,ಮುಲ್ಕಿ ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ ಅಂಚನ್ , ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಬಿಜೆಪಿ ಮುಖಂಡರಾದ ಈಶ್ವರ ಕಟೀಲ್, ಉದಯ ಅಮೀನ್ ಮಟ್ಟು, ವಿಠಲ್ ಎನ್.ಎಂ., ಸಾಧು ಅಂಚನ್ ಮಟ್ಟು, ಗಿರಿಧರ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು. ವಿಜಯೋತ್ಸವದಲ್ಲಿ ಬಿಜೆಪಿಯೊಳಗಿನ ಭಿನ್ನಮತ ಬಯಲಾಗಿದ್ದು, ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ ಕೃಷ್ಣ ಅಂಗರಗುಡ್ಡೆ ಹಾಗೂ ಅವರ ಬೆಂಬಲಿಗರ ಗೈರು ಎದ್ದು ಕಾಣುತ್ತಿತ್ತು.
Kshetra Samachara
11/02/2021 04:56 pm