ಸುಳ್ಯ:ಕುಟುಂಬದ ರೀತಿಯಲ್ಲಿ ಗ್ರಾಮಸ್ಥರನ್ನು ಸೇರಿಸಿ ಅಭಿವೃದ್ಧಿಗೆ ಪೂರಕವಾದ ಈ ಗ್ರಾಮ ವಾಸ್ತವ್ಯ ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮ ವಾಸ್ತವ್ಯ ಎಲ್ಲಾ ಜಿಲ್ಲೆಗಳಲ್ಲಿ ನಡೆಯುವಂತಾಗಲಿ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಡಬ ತಾಲೂಕಿನ ಕೊಂಬಾರಿನಲ್ಲಿ ಭಾನುವಾರ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮ ನನ್ನ ಕಣ್ಣು ತೆರೆಸಿದೆ. ಇದರಿಂದ ಗ್ರಾಮಗಳ ಸಮಸ್ಯೆಗಳು ಬಗೆ ಹರಿಯಲಿದೆ. ಇಲಾಖೆಗಳು ಚುರುಕು ಪಡೆಯುತ್ತವೆ ಎಂದು ಅವರು ಹೇಳಿದರು. ಸಚಿವ ಅಂಗಾರರನ್ನು ಮುಕ್ತ ಕಂಠದಿಂದ ಹೊಗಳಿದ ಈಶ್ವರಪ್ಪ ಅಂಗಾರ ಅವರೊಬ್ಬ ನಿಷ್ಠಾವಂತ ಕಾರ್ಯಕರ್ತ ಮಾತ್ರವಲ್ಲದೆ ರಾಜ್ಯದ ಮಾದರಿ ರಾಜಕಾರಣಿ ಎಂದರು.
ಕೊಂಬಾರು ಗ್ರಾಮದ ನಾಲ್ಕು ರಸ್ತೆಗಳ ಅಭಿವೃದ್ಧಿಗೆ ಬದ್ಧ ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆದ ಹಿಂದುಳಿದ ಪ್ರದೇಶವಾದ ಕೊಂಬಾರು ಗ್ರಾಮದ ಜನರ ಬಹು ಬೇಡಿಕೆಯಾದ ನಾಲ್ಕು ರಸ್ತೆಗಳನ್ನು ಅಭಿವೃದ್ಧಿ ಮಾಡಲು ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಗ್ರಾಮ ವಾಸ್ತವ್ಯ ವನ್ನು ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಮಡಪ್ಪಾಡಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ದ ಕೈಪಿಡಿಯನ್ನು ಸಚಿವ ಈಶ್ವರಪ್ಪ ಬಿಡುಗಡೆಗೊಳಿಸಿದರು.
ಬಂದರು,ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ,ಸುಳ್ಯ ವಿಧಾನಸಭೆ ಕ್ಷೇತ್ರ ಬಹಳಷ್ಟು ಗ್ರಾಮೀಣ ಭಾಗವನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಪ್ರಮುಖ ಬೇಡಿಕೆಯಾಗಿದೆ. ಅನುದಾನದ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.
ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಸ್ಥಳೀಯ ಅನುದಾನಗಳು ಸಾಕಾಗುವುದಿಲ್ಲ. ಅದಕ್ಕಾಗಿ ಗ್ರಾಮೀಣ ರಸ್ತೆಗಳನ್ನು ಲೋಕೋಪಯೋಗಿ ರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸಿ ಹೆಚ್ಚು ಅನುದಾನ ತರಿಸಿ ಸರ್ವಋತು ರಸ್ತೆಗಳನ್ನಾಗಿ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಪತ್ರಕರ್ತರ ಗ್ರಾಮ ವಾಸ್ತವ್ಯ ಪರಿಕಲ್ಪನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗೃತಿ ಮೂಡಿಸುವ ಕಾಯ್ರಕ್ರಮ ಆಗಲಿದೆ. ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ದ.ಕ ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು,ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು,ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
01/02/2021 06:47 pm