ಮುಲ್ಕಿ: ಮುಲ್ಕಿ ನಪಂ ವ್ಯಾಪ್ತಿಯ ಕೆಎಸ್ ರಾವ್ ನಗರದ ಪ್ರಧಾನ ರಸ್ತೆಯಲ್ಲಿ ಕೊಲ್ನಾಡು ವಿದ್ಯುತ್ ಸಬ್ ಸ್ಟೇಷನ್ ನಿಂದ 33 ಕೆವಿ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಕಾರ್ಯ ಸ್ಥಳೀಯರ ಪ್ರತಿಭಟನೆಯಿಂದ ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸ್ಥಳೀಯ ನಪಂ ಸದಸ್ಯರು ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಮುಲ್ಕಿ ನಪಂ ಮುಖ್ಯಾಧಿಕಾರಿ ಹಾಗೂ ಮೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಗುರುವಾರ ಸ್ಥಳೀಯ ನಪಂ ಸದಸ್ಯರಾದ ವಿಮಲಾ ಪೂಜಾರಿ, ಮುನ್ನಾ ಯಾನೆ ಮಹೇಶ, ಸಂದೀಪ್ ಕುಮಾರ್, ಮಂಜುನಾಥ ಕಂಬಾರ ಮತ್ತು ಸಾಮಾಜಿಕ ಕಾರ್ಯಕರ್ತರಾದ ನವೀನ್ ಪುತ್ರನ್, ಸಮೀರ್ ಕೆ ಎಸ್ ಆರ್ ನಗರ, ಅಶೋಕ್ ಪೂಜಾರಿ, ಮಂಜುನಾಥ ಆರ್ ಕೆ ನೇತೃತ್ವದಲ್ಲಿ ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಮುಖ್ಯಾಧಿಕಾರಿ ಚಂದ್ರ ಪೂಜಾರಿ ಹಾಗೂ ಮುಲ್ಕಿ ಮೆಸ್ಕಾಂ ಸೆಕ್ಷನ್ ಆಫೀಸರ್ ವಿವೇಕಾನಂದ ಶೆಣೈ ಸಮಕ್ಷಮದಲ್ಲಿ ಮುಲ್ಕಿ ನಪಂ ಕಚೇರಿಯಲ್ಲಿ ಕಾಮಗಾರಿ ಬಗ್ಗೆ ತೀವ್ರ ಚರ್ಚೆ ನಡೆಯಿತು.
ನಪಂ ಸದಸ್ಯೆ ವಿಮಲಾ ಪೂಜಾರಿ ಮಾತನಾಡಿ, ಕೆಎಸ್ ರಾವ್ ನಗರದ ಜನನಿಬಿಡ ಪ್ರಧಾನ ರಸ್ತೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಅಪಾಯಕಾರಿ 33ಕೆವಿ ವಿದ್ಯುತ್ ಕೇಬಲ್ ಅಳವಡಿಸುತ್ತಿದ್ದು ಪರಿಸರದ ಶಾಲೆ, ಅಂಗನವಾಡಿಗೆ ಹೋಗುವ ಮಕ್ಕಳಿಗೆ ತೀವ್ರ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಸಾಮಾಜಿಕ ಕಾರ್ಯಕರ್ತ ನವೀನ್ ಪುತ್ರನ್ ಮಾತನಾಡಿ, ಯಾವುದೇ ಕಾರಣಕ್ಕೂ ಅಪಾಯಕಾರಿ ಭೂಗತ ಕೇಬಲ್ ಅಳವಡಿಸಲು ಬಿಡುವುದಿಲ್ಲ. ಸ್ಥಳೀಯ ನಾಗರಿಕರಿಗೆ ಮಾಹಿತಿ ನೀಡದೆ ಕಾಮಗಾರಿ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಅನಾಹುತಕ್ಕೆ ಯಾರು ಹೊಣೆ? ಕೂಡಲೇ ಮೆಸ್ಕಾಂ ಹಿರಿಯ ಅಧಿಕಾರಿಗಳು ಲಿಖಿತ ರೂಪದಲ್ಲಿ ಅಪಾಯವಾಗುವುದಿಲ್ಲ ಎಂದು ಬರೆದು ನೀಡಬೇಕು. ಇಲ್ಲದಿದ್ದರೆ, ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದರು. ಸಾಮಾಜಿಕ ಕಾರ್ಯಕರ್ತ ಸಮೀರ್ ಮಾತನಾಡಿ, ಕಾಮಗಾರಿ ಅಸುರಕ್ಷತೆಯಿಂದ ಕೂಡಿದ್ದು ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ. ಕಾಮಗಾರಿಯಿಂದ ಸ್ಥಳೀಯರು ಭಯಭೀತರಾಗಿದ್ದು ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದರೆ, ಸ್ಥಳೀಯರು ಕಾಮಗಾರಿಗೆ ಅಗೆದಿರುವ ಹೊಂಡ ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಕಾಮಗಾರಿಯ ಬಗ್ಗೆ ನಪಂ ಸದಸ್ಯರು ಹಾಗೂ ಮೆಸ್ಕಾಂ ಅಧಿಕಾರಿಗಳ ನಡುವೆ ಬಿಸಿಬಿಸಿ ಚರ್ಚೆ ನಡೆದು, ಬಳಿಕ ಅಧ್ಯಕ್ಷರ ಜೊತೆ ಮಾತನಾಡಿದಾಗ ಅಧ್ಯಕ್ಷ ಸುಭಾಷ್ ಶೆಟ್ಟಿ ಸಮಾಧಾನ ದಿಂದಲೇ ಉತ್ತರಿಸಿ, ಜನಹಿತ ಕಾರ್ಯಕ್ಕೆ ತಮ್ಮ ಬೆಂಬಲವಿದೆ ಎಂದರು. ಬಳಿಕ ಅಧ್ಯಕ್ಷರ ಸೂಕ್ತ ಭರವಸೆಯೊಂದಿಗೆ ಸಭೆ ಮುಕ್ತಾಯವಾಯಿತು.
ಬಳಿಕ ಸಾಮಾಜಿಕ ಕಾರ್ಯಕರ್ತ ನವೀನ್ ಪುತ್ರನ್ ಮಾತನಾಡಿ, ಜನವಿರೋಧಿ ಕಾಮಗಾರಿಗೆ ಯಾವುದೇ ಬೆಂಬಲವಿಲ್ಲ. ಬಲವಂತದ ಕಾಮಗಾರಿ ನಡೆಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
Kshetra Samachara
21/01/2021 04:48 pm