ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ ನಗರ ಪಂಚಾಯಿತಿ ಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ನಡೆಯಿತು. ಸಭೆ ಶುರುವಾಗುವಾಗಲೇ ವಿಪಕ್ಷ ಸದಸ್ಯರಾದ ವಿಮಲಾ ಪೂಜಾರಿ, ಮುನ್ನಾ ಯಾನೆ ಮಹೇಶ, ಪುತ್ತುಬಾವ, ಸಂದೀಪ್ ಕುಮಾರ್, ಮಂಜುನಾಥ ಕಂಬಾರ ಎದ್ದು ನಿಂತು ಕೊಲ್ನಾಡು ವಿದ್ಯುತ್ ಕಾರ್ಯಾಗಾರದಿಂದ ಮುಲ್ಕಿಯ ಕೆಎಸ್ ರಾವ್ ನಗರ ಮೂಲಕ ಸಮೀಪದ ಏಳತ್ತೂರು ಐಡಿಯಲ್ ಐಸ್ ಕ್ರೀಂ ಕಂಪನಿಯ ಉದ್ಯಮಕ್ಕೆ 33 ಕೆವಿ ಅಪಾಯಕಾರಿ ಹೈಟೆನ್ಷನ್ ಭೂಗತ ಕೇಬಲ್ ಅಳವಡಿಸುವ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೆಎಸ್ ರಾವ್ ನಗರ ಪ್ರಧಾನ ರಸ್ತೆಯ ಬದಿಯಲ್ಲಿ ಅಪಾಯಕಾರಿ ವಿದ್ಯುತ್ ಲೈನ್ ಯಾವುದೇ ಮುಂಜಾಗರೂಕತೆ ಇಲ್ಲದೆ ಅಳವಡಿಸಲಾಗುತ್ತಿದ್ದು ಪಂಚಾಯತ್ ಸದಸ್ಯರನ್ನು ಕಡೆಗಣಿಸಿ ಏಕಾಏಕಿ ಕಾಮಗಾರಿಯನ್ನು ನಡೆಸಲಾಗುತ್ತಿದೆ ಕೂಡಲೇ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಸ್ಥಳೀಯ ಪಂಚಾಯತ್ ಸದಸ್ಯ ಮುನ್ನಾ ಯಾನೆ ಮಹೇಶ್ ಆಕ್ರೋಶಭರಿತರಾಗಿ ಹೇಳಿದರು. ಸದಸ್ಯ ಸಂದೀಪ್ ಮಾತನಾಡಿ ಕೆಎಸ್ ರಾವ್ ನಗರ ಪ್ರಧಾನ ಕುಡಿಯುವ ನೀರಿನ ಪೈಪಿನ ಜೊತೆಗೆ ಭೂಗತ ವಿದ್ಯುತ್ ಕೇಬಲ್ ನ್ನು ಅವೈಜ್ಞಾನಿಕ ರೀತಿಯಲ್ಲಿ ಅಳವಡಿಸಲಾಗುತ್ತಿದ್ದು ನೀರು ಸೋರಿಕೆಯಾಗಿ ವಿದ್ಯುತ್ ಕೇಬಲ್ ಗೆ
ತಾಗಿಕೊಂಡು ಅನಾಹುತ ನಡೆದರೆ ಯಾರು? ಆತಂಕ ವ್ಯಕ್ತಪಡಿಸಿದರು. ಸದಸ್ಯೆ ವಿಮಲಾ ಪೂಜಾರಿ ಮಾತನಾಡಿ ಯಾವುದೇ ಕಾರಣಕ್ಕೂ ಕೆಎಸ್ ರಾವ್ ನಗರದ ಪ್ರಧಾನ ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದರು.
ಆಗ ಶಾಸಕರು ಮತ್ತು ಆಡಳಿತ ಸದಸ್ಯರ ನಡುವೆ ಈ ಬಗ್ಗೆ ವಾಕ್ಸಮರ ನಡೆಯಿತು. ಶಾಸಕರು ವಿಪಕ್ಷ ಸದಸ್ಯರನ್ನು ಸಮಾಧಾನಪಡಿಸಿ ಸ್ಥಳಕ್ಕೆ ಕಾಮಗಾರಿಯ ಗುತ್ತಿಗೆದಾರ ರಮೇಶ್ ರಾವ್ ಮತ್ತು ಐಡಿಯಲ್ ಕಂಪೆನಿಯ ಎಲೆಕ್ಟ್ರಿಕಲ್ ಇಂಜಿನಿಯರ್ ಪ್ರಮೋದ್, ಮೂಲ್ಕಿ ಮೆಸ್ಕಾಂ ಸೆಕ್ಷನ್ ಆಫೀಸರ್ ವಿವೇಕಾನಂದ ಶೆಣೈ ಕರೆಸಿದಾಗ ವಿಪಕ್ಷ ಸದಸ್ಯರು ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲುಗಡೆ ಗೊಳಿಸಿ ಸ್ಥಳೀಯರ ಅಹವಾಲುಗಳನ್ನು ಸ್ವೀಕರಿಸಿ ಕಾಮಗಾರಿ ನಡೆಸಲು ತೀರ್ಮಾನಿಸಲಾಯಿತು.
ನೂತನವಾಗಿ ರಚನೆಯಾದ ಮುಲ್ಕಿ ನಗರ ಪಂಚಾಯಿತಿಗೆ ಸ್ಥಾಯಿ ಸಮಿತಿಯ ಸದಸ್ಯರನ್ನು ನೇಮಕ ಮಾಡುವ ಕುರಿತು ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮತ್ತೊಮ್ಮೆ ಸಂಘರ್ಷಕ್ಕೆ ಕಾರಣವಾಯಿತು. ಕಾಂಗ್ರೆಸ್ ಪಕ್ಷದ ನಗರ ಪಂಚಾಯತ್ ಸದಸ್ಯ ಪುತ್ತುಬಾವ ಮಾತನಾಡಿ ನ. ಪಂ.ನಲ್ಲಿ ನಮಗೆ ಬಹುಮತ ಇದ್ದರೂ ನೀವು ಆಡಳಿತ ನಡೆಸುತ್ತಿದ್ದೀರಿ ನಮಗೆ ಸಾಯಿ ಸಮಿತಿಯಲ್ಲಿ ಹೆಚ್ಚಿನ ಪಾಲು ನೀಡಿ ಎಂದು ಒತ್ತಾಯಿಸಿದರು. ಆದರೆ ಆಡಳಿತ ಪಕ್ಷದ ಸದಸ್ಯರು ಇದಕ್ಕೆ ಜಗ್ಗದೆ ಇದ್ದಾಗ ಮತ್ತೆ ಮಾತಿನ ಸಮರ ನಡೆಯಿತು. ಕಾಂಗ್ರೆಸ್ ಸದಸ್ಯೆ ವಿಮಲಾ ಪೂಜಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂಗ್ರೆಸ್ಗೆ ನೀಡುವಂತೆ ಒತ್ತಾಯಿಸಿದರು. ಈ ನಡುವೆ ಅಧ್ಯಕ್ಷ ಸುಭಾಷ್ ಶೆಟ್ಟಿ ಸಾಯಿ ಸಮಿತಿಯ ಸದಸ್ಯರ ಪಟ್ಟಿಯನ್ನು ಓದಿದಾಗ ವಿಪಕ್ಷ ಸದಸ್ಯರು ತೀವ್ರ ಆಕ್ಷೇಪ ಬಂದು ಆಯ್ಕೆಯನ್ನು ತಾತ್ಕಾಲಿಕ ನೆಲೆಯಲ್ಲಿ ಮುಂದೂಡಲಾಯಿತು.ನ. ಪಂ. ಸದಸ್ಯ ಪುತ್ತುಬಾವ ಮಾತನಾಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಕಟ್ಟಿದವರಿಗೆ ಇನ್ನೂ ಹಣ ಬಂದಿಲ್ಲ ಮನೆ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಈ ಬಗ್ಗೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ಗಮನಕ್ಕೆ ಬಂದಿದ್ದು ಕೊರೋನಾ ದಿಂದ ಸ್ವಲ್ಪ ವಿಳಂಬವಾಗಿದೆ ಎಂದರು. ಮುಲ್ಕಿಗೆ ಪೂರ್ಣಪ್ರಮಾಣದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಯೋಗೀಶ್ ಕೋಟ್ಯಾನ್ ಒತ್ತಾಯಿಸಿ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಎಂಬಲ್ಲಿ ಅಣೆಕಟ್ಟು ನಿರ್ಮಿಸಿ ಕುಡಿಯುವ ನೀರನ್ನು ಒದಗಿಸುವ ಬಗ್ಗೆ ಏನಾಯಿತು? ಎಂದು ಕೇಳಿದಾಗ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಮಟ್ಟು ಆಣೆಕಟ್ಟು ಕಾಮಗಾರಿ ಸರ್ವೆ ನಡೆಸಿದಾಗ ದುಬಾರಿಯಾಗುವ ಕಾರಣದಿಂದ ಕೈಬಿಟ್ಟಿದ್ದು ಹಳೆಯಂಗಡಿಯ ನಂದಿನಿ ನದಿಯ ಬಳಿಯಲ್ಲಿ ಆದಷ್ಟು ಬೇಗ ಆಣೆಕಟ್ಟು ನಿರ್ಮಿಸಿ ಹಳೆಯಂಗಡಿ ಮುಲ್ಕಿ ಪರಿಸರದ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ನಿರ್ಮಿಸುವ ಭರವಸೆ ನೀಡಿದರು.
ಸಭೆಯಲ್ಲಿ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರದಲ್ಲಿ ಅಮರನಾಥ ಶೆಟ್ಟಿ ಬಡಾವಣೆ ಹೆಸರಿಡುವ ಬಗ್ಗೆ ಚರ್ಚೆ,ಮುಲ್ಕಿ ನಗರ ಪಂಚಾಯತ್ ಪೂರ್ಣ ನೆಲೆಯಲ್ಲಿ ಇಂಜಿನಿಯರ್ ನೇಮಕ, ಮಂಗಳೂರಿನ ತುಂಬೆ ನೀರಿನಿಂದ ಕುಡಿಯುವ ನೀರು ಅವ್ಯವಸ್ಥೆ, ಕೆರೆ ಅಭಿವೃದ್ಧಿಗೆ ಹಣ ಪೋಲಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು.ಸಭೆಯಲ್ಲಿ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಉಪಾಧ್ಯಕ್ಷ ಸತೀಶ್ ಅಂಚನ್ , ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.
Kshetra Samachara
16/01/2021 04:05 pm