ಮುಲ್ಕಿ: ಅಂತರಾಷ್ಟ್ರೀಯ ಸರ್ಫಿಂಗ್ ಖ್ಯಾತಿಯ ಸಸಿಹಿತ್ಲು ಮುಂಡಾ ಬೀಚ್ ಅಭಿವೃದ್ಧಿಗೆ ನಿರ್ಲಕ್ಷವೇ ಕಾರಣವಾಗಿದ್ದು ಇದರಿಂದಾಗಿ ಅಮಾಯಕ ಜೀವಗಳು ಬಲಿಯಾಗಿದೆ ಎಂದು ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್ ಆರೋಪಿಸಿದ್ದಾರೆ. ಅವರು ಹಳೆಯಂಗಡಿಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ಒಂದೂವರೆ ವರ್ಷಗಳಿಂದ ಜಿಲ್ಲಾಡಳಿತದ ನಿರ್ಲಕ್ಷದಿಂದ 14 ಮಂದಿ ಸಸಿಹಿತ್ಲು ಮುಂಡಾ ಬೀಚ್ ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ ಬಾರಿ ಹಳೆಯಂಗಡಿಯಲ್ಲಿ ಕಾಂಗ್ರೆಸ್ ಬೆಂಬಲಿತ ಪಂಚಾಯತಿ ಅಧಿಕಾರದಲ್ಲಿರುವಾಗ ಬೀಚ್ ರಕ್ಷಣೆಗೆ ನಾಲ್ಕು ಸಿಬ್ಬಂದಿಗಳನ್ನು ನೇಮಿಸಿದ್ದು, ಯಾವುದೇ ಸೂಚನೆ ನೀಡಿದೆ ಜಿಲ್ಲಾ ಪಂಚಾಯತ್ ಸಿ ಇ ಒ ಮುಖಾಂತರ ಹಳೆಯಂಗಡಿ ಪಂಚಾಯತ್ ಪಿಡಿಒ ಸೂಚನೆ ಮೇರೆಗೆ ಕೆಲಸದಿಂದ ತೆಗೆಯಲಾಗಿದೆ.
ಕಳೆದ ಕೆಲವರ್ಷಗಳಿಂದ ಅನೇಕ ಪ್ರವಾಸಿಗರು ಅಂತರಾಷ್ಟ್ರೀಯ ಖ್ಯಾತಿಯ ಸಸಿಹಿತ್ಲು ಮುಂಡಾ ಬೀಚ್ ಗೆ ಭೇಟಿ ನೀಡುತ್ತಿದ್ದು ಸೂಕ್ತ ರಕ್ಷಣೆ ಇಲ್ಲದೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಸಿಹಿತ್ಲು ಮುಂಡಾ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಳ್ಳಲು ಮಾಜೀ ಸಚಿವರಾದ ಅಭಯಚಂದ್ರ ಜೈನ್ ಕಾರಣಕರ್ತರು ಎಂದು ಹೇಳಿದ ವಸಂತ್ ಬೆರ್ನಾಡ್ ಈಗಿನ ಉಸ್ತುವಾರಿ ಸಚಿವರು, ಸಂಸದರು,ಶಾಸಕರು ಕೇವಲ ಚುನಾವಣೆ ಬರುವಾಗ ಗಿಮಿಕ್ ನಡೆಸಿ ಸಸಿಹಿತ್ಲು ಮುಂಡ ಬೀಚ್ ಉಳಿಸಲು ತಡೆಗೋಡೆ ಮಾಡುತ್ತೇನೆಂದು ಹೇಳಿ ಸುಳ್ಳು ಭರವಸೆಗಳ ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ವಿನಹ ಅಭಿವೃದ್ಧಿ ಶೂನ್ಯ ಎಂದು ಲೇವಡಿ ಮಾಡಿದರು. ಕಳೆದ ಕೆಲ ವರ್ಷಗಳ ಹಿಂದೆ ಅಂತರಾಷ್ಟ್ರೀಯ ಸರ್ಫಿಂಗ್ ಮೂಲಕ ಗಮನಸೆಳೆದಿದ್ದ ಸಸಿಹಿತ್ಲು ಮುಂಡಾ ಬೀಚ್ ಸಂಪೂರ್ಣ ನಾಶವಾಗುತ್ತಾ ಬಂದಿದ್ದು ಅಂಗಡಿ ಕೋಣೆಗಳು ನಿರ್ಮಾಣವಾಗಿದೆ, ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದೆ ಪ್ರವಾಸಿಗರು ಕಂಗಾಲಾಗಿದ್ದಾರೆ.
ಮೂಲ ಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕಳೆದ ಮೂರು ವರ್ಷಗಳಿಂದ ಈಗಿನ ಶಾಸಕರು ಕೇವಲ ಭರವಸೆಗಳಲ್ಲಿ ಕಾಲಹರಣ ಮಾಡಿದ್ದಾರೆ ವಿನಃ ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಕೇವಲ ರಾಜಕೀಯ ಮಾಡಲು ಸೀಮಿತರು ವಿನಃ ಅಭಿವೃದ್ಧಿ ಶೂನ್ಯ ಎಂದು ಲೇವಡಿ ಮಾಡಿದರು.
ಕಳೆದ ದಿನಗಳ ಹಿಂದೆ ಹಳೆಯಂಗಡಿ ಸಮೀಪದ ತೋಕೂರು ಮೂಲದ ಕುಟುಂಬಸ್ಥರು ಸಸಿಹಿತ್ಲು ಮುಂಡಾ ಬೀಚ್ ಗೆ ಈಜಾಡಲು ಬಂದು ಓರ್ವ ಪ್ರಾಣ ಕಳೆದುಕೊಂಡಿದ್ದು ಇನ್ನೊಬ್ಬರು ನೀರುಪಾಲಾಗಿದ್ದಾರೆ. ಆದರೆ ನೀರುಪಾಲಾದ ವರನ್ನು ಹುಡುಕುವ ಯತ್ನಕ್ಕೆ ಕೂಡ ಜಿಲ್ಲಾಡಳಿತ ಉದಾಸೀನ ಪ್ರವೃತ್ತಿಯನ್ನು ತೋರಿಸುತ್ತಿದೆ ಎಂದು ಕೆಂಡಕಾರಿದರು.
ಅಮಾಯಕ ಜೀವಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಸ್ಥಳೀಯ ಪಂಚಾಯತ್ ಸದಸ್ಯರು ತಮ್ಮ ಕಿಸೆಯಿಂದ ಹಣ ಖರ್ಚು ಮಾಡಿಕೊಂಡು ನಾಪತ್ತೆಯಾದವರನ್ನು ಹುಡುಕಿಸುವ ಯತ್ನ ನಡೆಸುತ್ತಿದ್ದಾರೆ ಇದಕ್ಕೆಲ್ಲ ಉತ್ತರ ನೀಡಬೇಕಾದ ಶಾಸಕರು, ಹಳೆಯಂಗಡಿ ಪಂಚಾಯಿತಿ ಪಿಡಿಓ ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಸಿಹಿತ್ಲು ಮುಂಡಾ ಬೀಚ್ ಅಭಿವೃದ್ಧಿ ಪಡಿಸುವುದರ ಜೊತೆಗೆ ಪ್ರವಾಸಿಗರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭ ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ಸಸಿಹಿತ್ಲು, ಚಂದ್ರಕುಮಾರ್,ಧನ ರಾಜ್ ಸಸಿಹಿತ್ಲು, ಅಬ್ದುಲ್ ಖಾದರ್, ಅಬ್ದುಲ್ ಅಜೀಜ್ ಹಳೆಯಂಗಡಿ ಉಪಸ್ಥಿತರಿದ್ದರು.
Kshetra Samachara
14/01/2021 08:48 pm