ಬಂಟ್ವಾಳ: ಪುರಸಭೆಯ ಸಾಮಾನ್ಯ ಸಭೆ ಕಳೆದ ಬಾರಿ ನಡೆದ ಸಂದರ್ಭ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದ ಆರೋಗ್ಯ ನಿರೀಕ್ಷಕರು ಈಗ ಕರ್ತವ್ಯಕ್ಕೆ ಹಾಜರಾಗದೇ ಇರುವುದು ಹಾಗೂ ತ್ಯಾಜ್ಯ ವಿಲೇವಾರಿ ಸಹಿತ ಆ ವಿಭಾಗಕ್ಕೆ ಸಂಬಂಧಿಸಿದ ಕೆಲಸಗಳು ನಡೆಯದೇ ಇರುವುದು ಬುಧವಾರ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು.
ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಎ.ಗೋವಿಂದ ಪ್ರಭು, ಆರೋಗ್ಯ ನಿರೀಕ್ಷಕರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು. ಕಸದ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದರೂ ಆರೋಗ್ಯ ನಿರೀಕ್ಷಕರು ಹಲವು ದಿನಗಳಿಂದ ಕಚೇರಿಗೆ ಬರುತ್ತಿಲ್ಲ. ಉಳಿದವರಲ್ಲಿ ಕೇಳಿದರೆ ಸಕಾರಾತ್ಮಕ ಸ್ಪಂದನೆ ದೊರಕುತ್ತಿಲ್ಲ ಎಂದು ಸದಸ್ಯರಾದ ಮುನೀಶ್ ಆಲಿ, ರಾಮಕೃಷ್ಣ ಆಳ್ವ ದೂರಿದರು.
ಈ ಸಂದರ್ಭ ಡೆತ್ ನೋಟ್ ಮಾಧ್ಯಮಗಳಿಗೆ ತಲುಪಿದ ವಿಚಾರದ ಕುರಿತು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಮಾತಿನ ಚಕಮಕಿಯೂ ನಡೆದು ಆರೋಪ - ಪ್ರತ್ಯಾರೋಪ ಕೇಳಿ ಬಂದವು.
ಈ ಬಗ್ಗೆ ಉತ್ತರಿಸಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು ನನ್ನ ವಿರುದ್ಧವೇ ಬರೆದಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ನಗರ ಕೋಶದ ಯೋಜನಾ ನಿರ್ದೇಶಕರಿಗೆ ತನಿಖೆ ನಡೆಸುವಂತೆ ದೂರಿಕೊಂಡ ಹಿನ್ನೆಲೆಯಲ್ಲಿ ಮೂರು ಮಂದಿ ಅಧಿಕಾರಿಗಳ ತಂಡ ವಿಚಾರಣೆ ನಡೆಸಿದ ವೇಳೆ ನನ್ನಿಂದ ತಪ್ಪಾಗಿರುವುದಾಗಿ ಒಪ್ಪಿಕೊಂಡಿರುವುದಾಗಿ ಅಧ್ಯಕ್ಷ ಮಹಮ್ಮದ್ ಶರೀಫ್ ಸಭೆಯ ಗಮನಕ್ಕೆ ತಂದರು.
ಡೆಪ್ಯುಟೇಶನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ನಿರೀಕ್ಷಕರನ್ನು ಬೇರೆಡೆಗೆ ಕಳುಹಿಸಿ, ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಪರಿಸರ ಎಂಜಿನಿಯರ್ ಅವರನ್ನು ಮತ್ತೆ ಬಂಟ್ವಾಳಕ್ಕೆ ಕರೆಸುವಂತೆ ಮಹಮ್ಮದ್ ನಂದರಬೆಟ್ಟು ಒತ್ತಾಯಿಸಿದರು. ಹಿಂದಿನ ಪರಿಸರ ಎಂಜಿನಿಯರ್ ಅವರನ್ನು ಮತ್ತೆ ಬಂಟ್ವಾಳಕ್ಕೆ ಕಳುಹಿಸುವಂತೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸಭೆಗೆ ತಿಳಿಸಿದರು
Kshetra Samachara
14/01/2021 10:58 am