ಮಂಗಳೂರು: ನಗರ ಬಳಿಯ ಗುರುಪುರ ಹೊಳೆಯಲ್ಲಿ ಅವ್ಯಾಹತವಾಗಿ ಮರಳುಗಾರಿಕೆ ನಡೆಸುತ್ತಿರುವುದರಿಂದ ಮೀನುಗಾರಿಕೆ ನಡೆಸಲು ತೊಂದರೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ರಾಷ್ಟ್ರೀಯ ಮೀನುಗಾರರ ಸಂಘದ ಉಪಾಧ್ಯಕ್ಷ ವಾಸುದೇವ ಬೋಳೂರು ಆಗ್ರಹಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಗಣಿ ವಿಜ್ಞಾನ ಇಲಾಖೆ, ಮೀನುಗಾರಿಕೆ ಉಪನಿರ್ದೇಶಕರು, ಪರಿಸರ ಇಲಾಖೆ, ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನದಿತೀರದಲ್ಲಿ ಮರಳುಗಾರಿಕೆ ನಡೆಸುತ್ತಿರುವುದರಿಂದ ನೀರಿನ ಆಳ ಹೆಚ್ಚಾಗಿ ಮೀನುಗಾರಿಕೆ ನಡೆಸಲು ಬಹಳ ಕಷ್ಟವಾಗಿದೆ. ಇದರಿಂದ ನದಿತೀರದಲ್ಲಿ ಮರುವಾಯಿ (ಮೃದ್ವಂಗಿ) ಹೆಕ್ಕುವ ಮಹಿಳೆಯರಿಗೂ ತೊಂದರೆಯಾಗುತ್ತಿದೆ. ಮೊದಲಿಗೆ ದೋಣಿ ಮೂಲಕ ಹೊಳೆಯಲ್ಲಿ ಬಹುದೂರ ಸಾಗಿ ಮೀನುಗಾರಿಕೆ ನಡೆಸಲಾಗುತ್ತಿತ್ತು. ಆದರೆ, ಈಗ ಮರಳು ತೆಗೆದು ನದಿಯ ಆಳ ಹೆಚ್ಚಾಗಿರುವುದರಿಂದ ದೋಣಿ ನದಿಯಲ್ಲಿ ಸಾಗಿಸಲು ಕಷ್ಟವಾಗುತ್ತಿದೆ ಎಂದರು.
ರಾತ್ರಿ ವೇಳೆ ಕೆಲವರು ಇಂಜಿನ್ ಅಳವಡಿಸಿ ಮರಳು ತೆಗೆಯುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ. ರಾಸಾಯನಿಕ ಪದರಗಳು ಮೇಲೆ ಬಂದು ಮೀನುಗಾರಿಕೆಗೆ ಅಡ್ಡಿಯಾಗುತ್ತಿದೆ. ಅಲ್ಲದೆ ಮೀನಿನ ಆಹಾರವಾದ ಪಾಚಿ ಇತ್ಯಾದಿ ಅಂಶವೂ ನಶಿಸುತ್ತಿದ್ದು, ಇದರಿಂದಾಗಿ ಮೀನಿನ ಸಂತತಿಯೂ ನಾಶವಾಗುತ್ತಿದೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಾಗಿ ವಾಸುದೇವ ಬೋಳೂರು ಒತ್ತಾಯಿಸಿದ್ದಾರೆ.
Kshetra Samachara
01/01/2021 04:39 pm