ಮಂಗಳೂರು: ನಮ್ಮದು ಆಜಾನ್, ಧರ್ಮ, ಪ್ರಾರ್ಥನೆಯ ವಿರುದ್ಧದ ಹೋರಾಟವಲ್ಲ. ಸುಪ್ರೀಂ ಕೋರ್ಟ್ ಆದೇಶ ಏನಿದೆಯೋ ಅದನ್ನು ಪಾಲಿಸಬೇಕೆಂಬುದು ನಮ್ಮ ಹೋರಾಟವಾಗಿದೆ ಎಂದು ಶ್ರೀರಾಮಸೇನೆಯ ರಾಜ್ಯಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಹೇಳಿದ್ದಾರೆ.
ನಗರದ ಬಲ್ಮಠದಲ್ಲಿರುವ ಆರ್ಯ ಸಮಾಜದಲ್ಲಿ ಮಾತನಾಡಿದ ಅವರು, ಆಜಾನ್ ಮೈಕ್ ತೆಗೆಯಲು ನಾವು ಮೇ 9 ತಾರೀಕಿನವರೆಗೆ ಗಡುವು ನೀಡಿದ್ದೆವು. ಆಜಾನ್ ಮೈಕ್ ಸ್ಥಗಿತಗೊಳಿಸಲು ಎಲ್ಲಾ ಜನಪ್ರತಿನಿಧಿಗಳಲ್ಲೂ ಸಾಕಷ್ಟು ಮನವಿ ಮಾಡಿದ್ದೇವೆ. ಆದರೆ ಯಾವುದೇ ಫಲ ದೊರಕದ ಹಿನ್ನೆಲೆಯಲ್ಲಿ ನಾವು ಅಂದು ಪ್ರತಿಭಟನಾರ್ಥವಾಗಿ ಆಜಾನ್‌ನಷ್ಟೇ ದೊಡ್ಡ ಸ್ವರದಲ್ಲಿ ಸುಪ್ರಭಾತ, ಓಂಕಾರ ನಾದವನ್ನು ಹಾಕಿದ್ದೇವೆ ಎಂದು ಹೇಳಿದರು.
ಯಕ್ಷಗಾನದಲ್ಲಿ ಮೈಕ್ ಬಳಸುವ ವಿಚಾರವು ಯಕ್ಷಗಾನ ವೀಕ್ಷಕರು, ಸಂಘಟಕರಿಗೆ ಸಂಬಂಧಪಟ್ಟದ್ದಾಗಿದೆ. ಯಕ್ಷಗಾನ ನಡೆಯುವ ಸಂದರ್ಭ ವೀಕ್ಷಕರಿಗೆ ಮಾತ್ರ ಮೈಕ್ ನ ಅವಶ್ಯಕತೆ ಇರುತ್ತದೆ. ಅಲ್ಲದೆ ಯಕ್ಷಗಾನ ಆಯೋಜಕರಿಗೆ ಮೈಕ್ ಅನುಮತಿಗೆ 15 ದಿನಗಳ ಅವಕಾಶ ಇರುತ್ತದೆ. ಸುಪ್ರೀಂ ಕೋರ್ಟ್ ಆದೇಶ ಎಲ್ಲರಿಗೂ ಅನ್ವಯವಾಗುವ ಹಿನ್ನೆಲೆಯಲ್ಲಿ ಎಲ್ಲರೂ ಪಾಲನೆ ಮಾಡಬೇಕಾದ ಅಗತ್ಯವಿದೆ. ಆದ್ದರಿಂದ ನಾವು ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಪ್ರಮೋದ್ ಮುತಾಲಿಕ್ ಅವರದ್ದು, ರಾಮಸೇನೆಯಲ್ಲ, ರಾವಣ ಸೇನೆಯೆಂಬ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್ ಮಸೂದ್ ಅವರ ಹೇಳಿಕೆ ಖಂಡನೀಯ. ಅಲ್ಲದೆ ಅವರು ಮುತಾಲಿಕ್‌ರನ್ನು ಉಕ್ರೇನ್‌ಗೆ ಹೋಗಲಿ ಎಂದು ಹೇಳಿದ್ದಾರೆ. ಆದರೆ ಉಕ್ರೇನ್‌ಗೆ ಮುತಾಲಿಕ್ ಅವರಲ್ಲ, ಮಸೂದ್ ಅವರೇ ಹೋಗಲಿ. ನಾವು ರಾಮನನ್ನಷ್ಟೇ ಅಲ್ಲ ರಾವಣನನ್ನೂ ಭಕ್ತಿಯಿಂದ ಪೂಜಿಸುತ್ತೇವೆ. ರಾವಣನಿಗಾಗಿಯೇ ದೇಶದ ಐದು ಕಡೆಗಳಲ್ಲಿ ದೇವಾಲಯಗಳಿವೆ. ಮಸೂದ್ ಅವರು ರಾವಣನ ಬಗ್ಗೆ ತಿಳಿಯದೆ ತಪ್ಪು ಮಾತನಾಡುತ್ತಿದ್ದಾರೆ. ನಮಗೆ ರಾವಣನ ಮೇಲೆ ನಂಬಿಕೆಯಿದೆ. ಇವರ ಮಾತಿನಿಂದ ನಾವು ಕುಗ್ಗೋದಿಲ್ಲ. ಆದ್ದರಿಂದ ಮುತಾಲಿಕ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಮಸೂದ್ ಅವರು ಕ್ಷಮೆ ಯಾಚಿಸಲಿ ಎಂದು ಆನಂದ ಶೆಟ್ಟಿ ಅಡ್ಯಾರ್ ಹೇಳಿದರು.
PublicNext
13/05/2022 10:51 pm