ಉಡುಪಿ: ಹಿಜಾಬ್ ಧರಿಸಲು ಅನುಮತಿ ಕೋರಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿನಿಯರು ಹಿಂದೆ ಶಾಲಾ ನಿಯಮಾವಳಿಗಳಿಗೆ ಒಪ್ಪಿ ಪತ್ರಕ್ಕೆ ಸಹಿ ಹಾಕಿದ ಬಳಿಕವೂ ಹಿಜಾಬ್ ಧರಿಸಲು ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾ ನಿರತ ವಿದ್ಯಾರ್ಥಿನಿಯರ ಪೈಕಿ ಅಲಿಯಾ ಬಾನು ಎಂಬಾಕೆ ಈ ಹಿಂದೆ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಹಿಜಾಬ್ ಇಲ್ಲದೆ ಭಾಗವಹಿಸಿದ್ದಾರೆ. ಈ ಬಗ್ಗೆ ಫೋಟೊ ದಾಖಲೆಗಳಿವೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಂದಿನಿಂದಲೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಿರಲಿಲ್ಲ. ಈಚೆಗೆ 6 ವಿದ್ಯಾರ್ಥಿನಿಯರು ವಿವಾದ ಸೃಷ್ಟಿಸಿದ್ದಾರೆ ಎಂದು ಹೇಳಿರುವ ಅವರು ಕೆಲವು ಫೋಟೊ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಗುಪ್ತ ತರಬೇತಿ?
ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಒತ್ತಾಯಿಸುತ್ತಿರುವ ವಿದ್ಯಾರ್ಥಿನಿಯರಿಗೆ ಧಾರ್ಮಿಕ ವಿಚಾರಗಳ ಬಗ್ಗೆ ಗುಪ್ತಸ್ಥಳದಲ್ಲಿ ತರಬೇತಿ ನೀಡಲಾಗಿದೆ ಎಂದು ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿರುವ ಅವರು 'ಆರಂಭದಲ್ಲಿ ಉಡುಪಿ ಕಾಲೇಜಿನ 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ಕೋರಿ ಮನವಿ ನೀಡಿದ್ದರು. ಅವರಲ್ಲಿ 6 ವಿದ್ಯಾರ್ಥಿನಿಯರು ನಿರ್ಧಾರದಿಂದ ಹಿಂದೆ ಸರಿದರು. ಉಳಿದ 6 ವಿದ್ಯಾರ್ಥಿನಿಯರ ತಲೆಗೆ ಧಾರ್ಮಿಕ ವಿಚಾರಗಳನ್ನು ತುಂಬಲಾಗಿದೆ' ಎಂದರು.ವಿದ್ಯಾರ್ಥಿನಿಯರು, ಪೋಷಕರು ಯಾರ ಜತೆ ಸಂಪರ್ಕ ಹೊಂದಿದ್ದರು ಎಂಬೆಲ್ಲ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದ್ದು ತನಿಖೆಯಿಂದ ಗೊತ್ತಾಗಲಿದೆ ಎಂದು ಹೇಳಿದರು.
PublicNext
09/02/2022 09:38 pm