ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಹಾಕಲಾಗಿರುವ ಸಾವರ್ಕರ್ ಭಾವಚಿತ್ರ ಇರುವ ಫ್ಲೆಕ್ಸ್ ಅನ್ನು ಕೂಡಲೇ ತೆರವುಗೊಳಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದಾಗ ಪೊಲೀಸರು ಭದ್ರತಾ ಕ್ರಮ ಬಿಗಿಗೊಳಿಸಿದರು. ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬ್ರಹ್ಮಗಿರಿ ಸರ್ಕಲ್‌ಗೆ ಆಗಮಿಸಿ, ವಿವಾದಿತ ಪ್ಲೆಕ್ಸ್ ಅನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಪ್ರಖ್ಯಾತ್ ಶೆಟ್ಟಿ, ಸಾರ್ವಕರ್ ಫ್ಲೆಕ್ಸ್ ವಿಚಾರದಲ್ಲಿ ರಾಜ್ಯದ ಎಲ್ಲ ಕಡೆ ಗಲಾಟೆಗಳು ನಡೆಯುತ್ತಿವೆ. ಇದೀಗ ಶಾಂತಾವಾಗಿರುವ ಉಡುಪಿಯಲ್ಲಿ ಹಾಕಿರುವ ಪ್ಲೆಕ್ಸ್‌ನಿಂದ ಗೊಂದಲ ಹಾಗೂ ಬಿಗುವಿನ ವಾತಾವರಣ ಕಂಡುಬರುತ್ತಿದೆ.ಹಾಗಾಗಿ ಯಾವುದೇ ಗಲಾಟೆ ಗಳಿಗೆ ಅವಕಾಶ ಕಲ್ಪಿಸದಂತೆ ಕೂಡಲೇ ಈ ಪ್ಲೆಕ್ಸ್‌ನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ನಗರಸಭೆಯವರು ಬ್ಯಾನರ್‌ಗೆ 15 ದಿನಗಳ ಕಾಲ ಪರವಾನಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪ್ಲೆಕ್ಸ್‌ನಲ್ಲಿ ಯಾವುದೇ ಲೈನ್ಸನ್ಸ್ ನಂಬರ್ ಹಾಕಿಲ್ಲ. ಒಂದು ವೇಳೆ ಅನುಮತಿ ನೀಡಿದ್ದರೂ ಇಂತಹ ಗೊಂದಲದ ಪರಿಸ್ಥಿತಿ ಯಲ್ಲಿ ಈ ಫ್ಲೆಕ್ಸ್ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದರು.
PublicNext
17/08/2022 01:29 pm