ಹಿಂದುತ್ವವನ್ನು ಆಧಾರವಾಗಿಟ್ಟುಕೊಂಡೇ ಸರಕಾರ ನಡೆಸುತ್ತೇವೆ.ರಾಷ್ಟ್ರೀಯತೆಯ ವಿಚಾರ ಅಭಿವೃದ್ಧಿಯ ವಿಚಾರಗಳನ್ನು ಎಲ್ಲ ವರ್ಗದವರೂ ಒಪ್ಪುತ್ತಾರೆ. ಆಕ್ರೋಶ, ಪ್ರತಿರೋಧ ಬಂದಿದೆ ಎಂಬ ಕಾರಣಕ್ಕೆ ರಾಷ್ಟ್ರೀಯತೆಯಿಂದ ವಿಮುಖರಾಗುವುದಿಲ್ಲ. ಜಿಹಾದಿಗಳ ಕುತಂತ್ರಗಳನ್ನು ಸಮಾಜದ ಮುಂದೆ ಇಡುತ್ತೇವೆ. ಸಮಾಜ ಈ ಕುರಿತು ಜಾಗೃತವಾಗಬೇಕು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಮಣಿಪಾಲದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಕಾರ ಬೇಕೋ ಹಿಂದುತ್ವ ಬೇಕೋ ಅಂದಾಗ ಸರ್ಕಾರವನ್ನು ಬದಿಗಿಟ್ಟು ಹಿಂದುತ್ವ ಆಯ್ಕೆ ಮಾಡಿಕೊಳ್ಳುತ್ತೇವೆ. ಬಿಜೆಪಿ ಆರಂಭ ಆಗಿದ್ದು ಮುಖರ್ಜಿಯವರು ಅಧಿಕಾರ ತ್ಯಜಿಸುವ ಮೂಲಕ. ಬಿಜೆಪಿ ಮತ್ತು ಜನಸಂಘದ ಹುಟ್ಟು ಆಗಿರುವುದೇ ಬಲಿದಾನದ ಮುಖಾಂತರ. ಇದೇ ಕಾರಣಕ್ಕೆ ನಾವು ಗೋ ಹತ್ಯೆ ನಿಷೇಧ ಕಾನೂನು ತಂದಿದ್ದೇವೆ. ಮತಾಂತರ ನಿಷೇಧ ಕಾಯ್ದೆ ತಂದಿದ್ದೇವೆ. ಸಮಾಜದ ಹಿತ ದೃಷ್ಟಿಯಿಂದ ಮತ್ತಷ್ಟು ಒಳ್ಳೆಯ ಕಾನೂನು ತರುತ್ತೇವೆ ಎಂದು ಹೇಳಿದ್ದಾರೆ.
ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಕರ್ತರ ಕೋಪ ಸಹಜವಾಗಿದೆ. ಕಾರ್ಯಕರ್ತರ ಕೋಪವನ್ನು ಯಾವತ್ತೂ ಸರಿಯಲ್ಲ ಎನ್ನುವುದಿಲ್ಲ. ಮನೆಯಲ್ಲಿ ಸಣ್ಣಪುಟ್ಟ ಅಪಸ್ವರ ಇರುತ್ತೆ. ತಂದೆ ಮಗನಿಗೆ, ಮಗ ತಂದೆಗೆ ಬುದ್ಧಿ ಹೇಳಲೇಬೇಕು. ಅದನ್ನು ಭಿನ್ನಾಭಿಪ್ರಾಯ ಎನ್ನಲು ಸಾಧ್ಯವಿಲ್ಲ. ಕಾರ್ಯಕರ್ತರು ನಮ್ಮ ಭಾವನೆಗಳಿಗೆ ಬೆಲೆ ಕೊಡಿ ಅನ್ನೋದು ಸರಿಯಾಗಿದೆ ಎಂದು ಹೇಳಿದರು.
Kshetra Samachara
01/08/2022 08:06 pm