ವರದಿ: ರಹೀಂ ಉಜಿರೆ
ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಜನ್ನಾಡಿ, ಗಿಳಿಯಾರು, ಚಿತ್ರಪಾಡಿ ಕಾರ್ಕಡ ಗ್ರಾಮಗಳಲ್ಲಿ ಭಾರಿ ಮಳೆಯಿಂದ ಮನೆಗಳು ಜಲ ದಿಗ್ಬಂಧನಕ್ಕೆ ಒಳಗಾಗಿವೆ. ಕೃತಕ ನೆರೆಯಿಂದಾಗಿ ಸಾಕಷ್ಟು ಕೃಷಿ ಭೂಮಿ ಕೂಡ ಜಲಾವೃತಗೊಂಡಿದೆ.
ಇವತ್ತು ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ಧ ರೋಡಿಗಿಳಿದು ಆಕ್ರೋಶ ವ್ಯಕ್ತಪಡಿದಿದರು. ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಬ್ರಹ್ಮಾವರ ತಾಲೂಕಿನ ಹಲವು ಗ್ರಾಮಸ್ಥರು ಸಾಕಷ್ಟು ಪರದಾಡುವಂತಾಗಿದೆ. ಇಲ್ಲಿನ ಪ್ರಮುಖ ರಸ್ತೆಯಲ್ಲಿ ನೀರು ನಿಂತಿದ್ದು ಜನರು ಅತ್ತಿಂದಿತ್ತ ಓಡಾಡೋದೇ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ತಾಳ್ಮೆಯ ಕಟ್ಟೆ ಒಡೆದಿದ್ದು ಇವತ್ತು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಊರಿಗೊಂದು ಸೇತುವೆ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳದ್ದು, ಅದನ್ನು ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ವಿಷಯ ತಿಳಿದ ಕುಂದಾಪುರ ಎಸಿ ರಾಜು ಅವರು ಸ್ಥಳಕ್ಕೆ ಧಾವಿಸಿ ಬಂದು ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಸಹಾಯಕ ಕಮಿಷನರ್ ರಾಜು ಗ್ರಾಮಸ್ಥರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಈ ವೇಳೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಮುಖಂಡ ಶ್ಯಾಮ್ ಸುಂದರ್ ನಾಯರಿ, ಇವತ್ತು ಸಾಂಕೇತಿಕ ಪ್ರತಿಭಟನೆ ಅಷ್ಟೇ ಮಾಡಿದ್ದೇವೆ. ಎಸಿ ಅವರು ಸ್ಥಳಕ್ಕೆ ಆಗಮಿಸಿ ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಭಾಗದ ಹಲವು ಮನೆಗಳು ಜಲಾವೃತಗೊಂಡಿದ್ದು ಗ್ರಾಮಸ್ಥರು ಮನೆಯ ಹೊರಗೆ ಬರದಂತಾಗಿದೆ. ಇನ್ನು ಪಕ್ಕದಲ್ಲಿ ಹರಿಯುವ ಹೊಳೆ ತುಂಬಿ ಹರಿಯುತ್ತಿದ್ದು ಕೃಷಿ ಭೂಮಿಗಳೂ ನೀರಿನಿಂದಾವೃತವಾಗಿದೆ. ಜನಪ್ರತಿನಿಧಿಗಳು ಇತ್ತಕಡೆ ಗಮನಹರಿಸಿ ಜನರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕಿದೆ.
Kshetra Samachara
06/07/2022 04:23 pm