ಮುಲ್ಕಿ: ಬಿಜೆಪಿ ಅತಿಕಾರಿ ಬೆಟ್ಟು ಗ್ರಾಪಂ ವ್ಯಾಪ್ತಿಯ ಶಕ್ತಿಕೇಂದ್ರದ ಕಾರ್ಯಕರ್ತರ ಸಮಾವೇಶ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅತಿಕಾರಿ ಬೆಟ್ಟು ಶಕ್ತಿಕೇಂದ್ರದ ಅಧ್ಯಕ್ಷ ಉದಯ ಅಮೀನ್ ಮಟ್ಟು ವಹಿಸಿದ್ದರು.
ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ, ಬಿಜೆಪಿ ಸಿದ್ಧಾಂತಗಳು ಹಿಂದುತ್ವ ರಾಷ್ಟ್ರೀಯತೆ ಹಾಗೂ ಅಭಿವೃದ್ಧಿಯ ಮೂಲ ಮಂತ್ರವಾಗಿದ್ದು, ಈ ಬಾರಿ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.
ಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರಾದ ಮಾಜಿ ಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ಸಿನ ಪ್ರಬಲ ನಾಯಕ ಮನೋಹರ ಕೋಟ್ಯಾನ್, ಜಯಕುಮಾರ್ ಮಟ್ಟು, ಅಶ್ವಥ್ ಕೊಲಕಾಡಿ, ಸಂತೋಷ್ ದೇವಾಡಿಗ ಅಂಗರಗುಡ್ಡೆ ಬಿಜೆಪಿ ಸೇರಿದರು. ಜಿಪಂ ಸದಸ್ಯ ವಿನೋದ್ ಬೊಳ್ಳೂರು, ತಾಪಂ ಸದಸ್ಯ ಶರತ್ ಕುಬೆವೂರು, ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಬರ್ಕೆ ತೋಟ, ಮಂಡಲ ಉಪಾಧ್ಯಕ್ಷ ಜಯಾನಂದ ಮುಲ್ಕಿ ,ಕಿನ್ನಿಗೋಳಿ ಶಕ್ತಿಕೇಂದ್ರದ ಪ್ರಭಾರಿ ಸುಕೇಶ್ ಶಿರ್ತಾಡಿ, ಕಿನ್ನಿಗೋಳಿ ಶಕ್ತಿಕೇಂದ್ರದ ಅಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ಪೂರ್ಣಿಮ, ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೇರ, ಎಸ್ಸಿ ಮೋರ್ಚಾದ ವಿಠಲ್ ಎನ್. ಎಂ., ಸಾಧು ಅಂಚನ್ ಮಟ್ಟು ನವೀನ್ ರಾಜ್, ರವೀಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಸಭೆಗೆ ಶಾಸಕ ಉಮಾನಾಥ ಕೋಟ್ಯಾನ್ ಗೈರುಹಾಜರಾಗಿದ್ದುದು ಬಿಜೆಪಿ ಕಾರ್ಯಕರ್ತರಿಗೆ ನಿರಾಸೆ ಯಾಗಿದ್ದರೆ ಇನ್ನೊಂದೆಡೆ ಅತಿಕಾರಿಬೆಟ್ಟು ಗ್ರಾ ಪಂನ ಪ್ರಬಲ ನಾಯಕ ಮನೋಹರ ಕೋಟ್ಯಾನ್ ಸೇರ್ಪಡೆ ಬಿಜೆಪಿಗೆ ಬಲ ತಂದಿದೆ.
ಕಾರ್ಯಕ್ರಮಕ್ಕೆ ಸ್ಥಳೀಯ ಬಿಜೆಪಿ ನಾಯಕ ರಂಗನಾಥ ಶೆಟ್ಟಿ ಸಹಿತ ಮನೋಹರ ಕೋಟ್ಯಾನ್ ಪ್ರತಿನಿಧಿಸುವ ಕೊಲಕಾಡಿ ಪ್ರದೇಶದ ಬೆಂಬಲಿಗರು ಸಭೆಯಲ್ಲಿ ಕಾಣದಿರುವುದು ಕೆಲವರಿಗೆ ಆತಂಕ ತಂದಿದ್ದರೆ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕ್ಷೇತ್ರದಲ್ಲಿ ರಾಜಕೀಯ ಹೊಡೆತ ನೀಡಲು ಬಿಜೆಪಿ ಹವಣಿಸುತ್ತಿದೆ ಎಂಬುದು ಮಾತ್ರ ಸತ್ಯವಾಗಿದ್ದು, ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ರಾಜಕೀಯ ಜಿದ್ದಾಜಿದ್ದಿನ ಹೋರಾಟಕ್ಕೆ ಇಂದಿನ ಕುಟುಂಬ ಮಿಲನ ಕಾರ್ಯಕ್ರಮ ಸಾಕ್ಷಿಯಾಗಲಿದೆ ಎಂದೇ ಹೇಳಲಾಗುತ್ತಿದೆ.
Kshetra Samachara
04/10/2020 10:29 pm