ಮುಲ್ಕಿ: ಬಳ್ಕುಂಜೆ, ಉಳೆಪಾಡಿ ಕೊಲ್ಲೂರು ಗ್ರಾಮಗಳಲ್ಲಿ ಕೈಗಾರಿಕೆಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಳ್ಕುಂಜೆ ಚರ್ಚ್ ನಲ್ಲಿ ಇಂದು ಸಂಜೆ ಭೂ ಸಂತ್ರಸ್ತರ ಹಿತರಕ್ಷಣಾ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ ಜರುಗಿತು.
ಈ ಸಂದರ್ಭ ಬಳ್ಕುಂಜೆ ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ, ಕೈಗಾರಿಕೆಗಳಿಗೆ ಕೃಷಿ ಭೂಮಿ ಕೊಡುವ ಪ್ರಶ್ನೆ ಇಲ್ಲವೇ ಇಲ್ಲ. ಕೈಗಾರಿಕೆ ಸ್ಥಾಪನೆಯಾದರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಕೃಷಿಗೆ ನೀರುಣಿಸುವ ಶಾಂಭವಿ ನದಿ ಮಲಿನವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಡೆನ್ನಿಸ್ ಡಿಸೋಜ ಮಾತನಾಡಿ, ಕೆಲವು ಸ್ಥಾಪಿತ ಹಿತಾಸಕ್ತಿಗಳು ಹೋರಾಟದ ದಿಕ್ಕು ತಪ್ಪಿಸಲು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ನಾವು ಮೂರು ಗ್ರಾಮಗಳ ರೈತರು ಒಗ್ಗಟ್ಟಾಗಿದ್ದು ಕೃಷಿ ಭೂಮಿ ಸ್ವಾಧೀನ ಪಡಿಸುವುದನ್ನು ವಿರೋಧಿಸುತ್ತೇವೆ ಎಂದರು.
ಸ್ಥಳೀಯ ಕೃಷಿಕ ವಸಂತ ಸುವರ್ಣ, ನಿರ್ಮಲ ರೊಡ್ರಿಗಸ್ ಮಾತನಾಡಿ ವಿನಾಕಾರಣ ಕೆಐಎಡಿಬಿ ಅಧಿಕಾರಿಗಳು ನೀಡಿದ ನೋಟಿಸ್ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಹೋದಾಗ ಅಮಿಷ ಒಡ್ಡಿ , ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದಾರೆ ಎಂದರು.
ಐಕಳ ಗ್ರಾಪಂ ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ, ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜ , ಉಪಾಧ್ಯಕ್ಷ ಆನಂದ ಕೊಲ್ಲೂರು, ಸದಸ್ಯರಾದ ಮರಿನಾ ಡಿಸೋಜ, ಮಾಜಿ ತಾಪಂ ಸದಸ್ಯ ನೆಲ್ಸನ್ ಲೋಬೋ, ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದ ಗಂಗಾಧರ ಪೂಜಾರಿ, ಮಸೀದಿಯ ಸಂಶುದ್ಧಿನ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದು, ಕೈಗಾರಿಕೆಗಳಿಗೆ ಭೂಸ್ವಾಧೀನ ಪಡಿಸುವುದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗೆ ಸಿದ್ಧತೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
Kshetra Samachara
17/06/2022 10:01 pm