ಮಂಗಳೂರು: ಹತ್ಯೆಯಾದ ಮಸೂದ್ ಹಾಗೂ ಫಾಝಿಲ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ತಲಾ 30 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಸರಣಿ ಕೊಲೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಜಿಲ್ಲಾಡಳಿತ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಂತಿ ಸಭೆ ಕರೆದಿತ್ತು. ಈ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಜಿಲ್ಲೆಗೆ ಆಗಮಿಸಿರುವ ಸಿಎಂ ಬೊಮ್ಮಾಯಿಯವರು ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ 25 ಲಕ್ಷ ರೂ. ಪರಿಹಾರ ನೀಡಿ ಮರಳಿದ್ದರು.
ಆದರೆ, ಉಳಿದಂತೆ ಹತ್ಯೆಯಾದ ಇಬ್ಬರು ಅಮಾಯಕ ಮುಸ್ಲಿಂ ಯುವಕರ ಮನೆಗೆ ಸಿಎಂ ಭೇಟಿ ನೀಡಿ ಪರಿಹಾರ ಘೋಷಿಸದಿರುವ ಬಗ್ಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳು ಜಿಲ್ಲಾಡಳಿತ ಶನಿವಾರ ಕರೆದಿರುವ ಶಾಂತಿಸಭೆಯನ್ನು ಬಹಿಷ್ಕರಿಸಿತ್ತು. ಈ ಮಧ್ಯೆ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲ್ಲಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಮನೆಯಲ್ಲಿ ನಡೆದಿರುವ ತುರ್ತು ಸಭೆಯಲ್ಲಿ ಮೃತ ಬೆಳ್ಳಾರೆಯ ಮುಹಮ್ಮದ್ ಮಸೂದ್ ಮತ್ತು ಮಂಗಳಪೇಟೆಯ ಮುಹಮ್ಮದ್ ಫಾಝಿಲ್ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ.
ಈ ಪರಿಹಾರವನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮಸೂದ್ ಮತ್ತು ಫಾಝಿಲ್‌ನ ಕುಟುಂಬಸ್ಥರಿಗೆ ತಲಾ 30 ಲಕ್ಷ ರೂ . ನೀಡಲಾಗುತ್ತದೆ. ಅಲ್ಲದೆ ಪ್ರಕರಣದ ಸಂಬಂಧ ಕುಟುಂಬಸ್ಥರಿಗೆ ಕಾನೂನಿನ ನೆರವು ನೀಡಲು ನಿರ್ಣಯಿಸಲಾಗಿದೆ.
Kshetra Samachara
31/07/2022 04:00 pm