ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಕೇರಳ ಗಡಿಭಾಗದಲ್ಲಿ ಆಗಿದ್ದು, ಈ ಪ್ರಕರಣದ ಹಿಂದೆ ಕೇರಳದ ನಂಟು ಇದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತನಿಖೆ ಮಾಡುತ್ತಿದ್ದೇವೆ. ಕೇರಳ ಪೊಲೀಸರು ಇದಕ್ಕೆ ಸಹಕರಿಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದರು.
ಪ್ರವೀಣ್ ನೆಟ್ಟಾರು ಹತ್ಯೆಯ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರನ್ನು ಭೇಟಿ ಮಾಡಲೆಂದು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಸ್ಥಳೀಯ ಅಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ನಮ್ಮ ಡಿಜಿ ಕೇರಳದ ಡಿಜಿಯವರೊಂದಿಗೆ ಮಾತನಾಡಿದ್ದೇನೆ. ಕಾಸರಗೋಡು ಎಸ್ ಪಿ ಜೊತೆ ನಮ್ಮ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸ್ ಇಲಾಖೆಗೆ ತನಿಖೆಗೆ ಸಂಪೂರ್ಣ ಸ್ವಾತಂತ್ರ ಕೊಡಲಾಗಿದೆ. ತನಿಖೆ ನಡೆಸಿ ಕೊಲೆಗಡುಕರಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಲು ನಮ್ಮ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಬಂಧಿತ ಆರೋಪಿಗಳು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೋ ಎಂಬುದು ತನಿಖೆಯ ಸಂದರ್ಭ ಬಹಿರಂಗಗೊಳಿಸೋದು ಕಷ್ಟ. ತನಿಖೆಯಾಗಲಿ ಆ ಬಳಿಕ ಎಲ್ಲವೂ ಹೊರಬರಲಿದೆ ಎಂದು ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಸುಳ್ಯದ ನೆಟ್ಟಾರುವಿಗೆ ತೆರಳಿದರು.
PublicNext
28/07/2022 06:41 pm