ಮಲ್ಪೆ: ಉಡುಪಿಯ ಮಲ್ಪೆ ಬಂದರಿನಲ್ಲಿ ಕಾರ್ಯಾಚರಿಸುತ್ತಿರುವ TEBMA ಶಿಪ್ ಯಾರ್ಡ್ ಮೀನುಗಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಭಾರೀ ವಿರೋಧದ ನಡುವೆಯೂ ಈ ಕಂಪೆನಿ ಇಲ್ಲಿ ತಲೆ ಎತ್ತಿತ್ತು. ಇದೀಗ ಇದರ ಲೀಸ್ ಅವಧಿ ಮುಗಿಯುತ್ತಾ ಬಂದಿದ್ದು ಇದನ್ನು ಇಲ್ಲಿಂದ ತೆರವು ಮಾಡಬೇಕು ಎಂಬ ಕೂಗು ಕೇಳಿಬರತೊಡಗಿದೆ.
ಏಷ್ಯಾದ ಸರ್ವಋತು ಮೀನುಗಾರಿಕೆ ಬಂದರು ಎಂಬ ಹೆಗ್ಗಳಿಕೆ ಮಲ್ಪೆ ಬಂದರ್ ನದ್ದು. ಇಲ್ಲಿ ಪ್ರತಿನಿತ್ಯ ಕೋಟ್ಯಂತರ ರೂಗಳ ಮೀನುಗಾರಿಕೆ ವವಹಿವಾಟು ನಡೆಯುತ್ತದೆ. ಇಂತಹ ಬಂದರಿನ ಒಂದು ಬದಿಯಲ್ಲಿ TEBMA ಎಂಬ ಶಿಪ್ ಯಾರ್ಡ್ ಕಂಪೆನಿ ತಲೆ ಎತ್ತಿ ನಿಂತಿತ್ತು. ಮೀನುಗಾರರ ತೀವ್ರ ವಿರೋಧದ ನಡುವೆಯೂ ಕಾರ್ಯಾಚರಿಸುತ್ತಿರುವ ಈ ಕಂಪೆನಿ, ಇಲ್ಲಿ ಬೃಹತ್ ಶಿಪ್ ಮತ್ತು ಟಗ್‌ಗಳನ್ನು ತಯಾರು ಮಾಡುತ್ತಿದೆ. ಆದರೆ ಈಗ 15 ವರ್ಷಗಳಿಗೆ ನೀಡಿದ ಲೀಸ್ ಅವಧಿ ಮುಗಿದಿದ್ದು ಇದನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು ಎಂಬ ಬಲವಾದ ಕೂಗು ಎದ್ದಿದೆ.
ಮಲ್ಪೆ ಬಂದರಿನಲ್ಲಿ ಬೋಟುಗಳ ಸಂಖ್ಯೆ ವಿಪರೀತ ಹೆಚ್ಚುತ್ತಿದೆ. ಕೇವಲ 900 ಬೋಟುಗಳು ನಿಲ್ಲುವ ಸ್ಥಳದಲ್ಲಿ ಬರೋಬ್ವರಿ ಎರಡು ಸಾವಿರಕ್ಕೂ ಅಧಿಕ ಬೋಟುಗಳು ಲಂಗರು ಹಾಕುತ್ತಿವೆ. ಬೋಟು ನಿಲ್ಲಿಸಲು ಸ್ಥಳ ಸಾಲದೆ ಅಕ್ಕಪಕ್ಕದ ಕಿರು ಬಂದರಲ್ಲೂ ಬೋಟ್ ನಿಲ್ಲಿಸಬೇಕಾಗುತ್ತೆ. ಸ್ಥಳಾವಕಾಶದ ಕೊರತೆಯಿಂದ ಬೋಟ್ ಗಳಲ್ಲಿ ಕಳ್ಳತನವೂ ಸಾಮಾನ್ಯ.ಇಲ್ಲಿರುವ ಕಂಪೆನಿಯನ್ನು ಸ್ಥಳಾಂತರ ಮಾಡಿದರೆ ಆ ಜಾಗವನ್ನು ಮೀನುಗಾರು ಬಳಸಬಹುದು ಎಂಬುದು ಮೀನುಗಾರ ಮುಖಂಡರ ವಾದ.
ಸರ್ವ ಋತುಗಳಲ್ಲಿ ಬಳಸಬಹುದಾದ ಈ ಪ್ರದೇಶವನ್ನು ಕೇವಲ ಮೀನುಗಾರರಿಗೆ ಮಾತ್ರ ಮೀಸಲಿಡಬೇಕು. ಖಾಸಗಿ ಕಂಪೆನಿಯನ್ನು ಇಲ್ಲಿಂದ ತೆರವು ಮಾಡಬೇಕು ಎಂಬುದು ಮೀನುಗಾರರ ಆಗ್ರಹ. ಜನಪ್ರತಿನಿಧಿಗಳು ಮೀನುಗಾರರ ಬೇಡಿಕೆಯನ್ನು ಈಡೇರಿಸುತ್ತಾರಾ ಕಾದು ನೋಡಬೇಕಿದೆ.
ವರದಿ: ರಹೀಂ ಉಜಿರೆ
PublicNext
29/06/2022 07:40 pm