ವಿಶೇಷ ವರದಿ : ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್
ಕುಂದಾಪುರ: ರಾಜ್ಯದಲ್ಲಿ ಹಾಲಿ ನಡೆಯುತ್ತಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ/ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ) ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸಿ ಹೊಸದಾಗಿ 6ನೇ ತರಗತಿ, 9ನೇ ತರಗತಿ, ಪ್ರಥಮ ಪಿಯುಸಿ ತರಗತಿಗಳನ್ನು 2018-19ನೇ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸುವ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ನೀಡಿದ್ದ ಆದೇಶ ಕಸದ ಬುಟ್ಟಿ ಸೇರಿದೆ!
2018ರ ಮಾರ್ಚ್ 20ರಂದು ಸರ್ಕಾರದ ಆದೇಶ ಸಂಖ್ಯೆ : ಇಡಿ 132 ಪಿಬಿಎಸ್ 2018 ಬೆಂಗಳೂರು ಹಾಗೂ ಜಿಲ್ಲಾ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಸ್ತಾವನೆ ಹಾಗೂ ಶಿಫಾರಸ್ಸು ಮೇರೆಗೆ ನೀಡಲಾದ ಆದೇಶ ಹಳ್ಳ ಹಿಡಿದೆ.
ಆದೇಶ ಅನುಷ್ಟಾನವಾಗಿದ್ದರೆ 2018-19ನೇ ಶೈಕ್ಷಣಿಕ ಸಾಲಿನಿಂದ 500 ಸರ್ಕಾರಿ ಪ್ರೌಢಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಆರಂಭವಾಗುತ್ತಿದ್ದವು. ಆಗ ರಾಜ್ಯದ 361 ಪ್ರೌಢಶಾಲೆಗಳು ಪದವಿಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೇರುತ್ತಿದ್ದವು. ಇದರಿಂದ ರಾಜ್ಯದ ಗ್ರಾಮೀಣ ಪ್ರೌಢಶಾಲೆಗಳು ಉನ್ನತೀಕರಣಗೊಂಡು ಹಳ್ಳಿಯ ಮಕ್ಕಳು ಸುಲಭವಾಗಿ ಪದವಿಪೂರ್ವ ಶಿಕ್ಷಣ ಪಡೆಯುತ್ತಿದ್ದರು.
ಅಲ್ಲದೇ 1204 ಉಪನ್ಯಾಸಕರ ನೇಮಕಾತಿಯು ಮಾರ್ಚ್ 2018ರ ಒಳಗೆ ಮಾಡಿಕೊಳ್ಳಲಾಗುತ್ತಿತ್ತು. ಅದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಪ್ರವೇಶ ಪರೀಕ್ಷೆಯನ್ನು ನಡೆಸಿಲ್ಲ. ಉಪನ್ಯಾಸಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು CAC/KPSC ಗೂ ಅವಕಾಶ ಕಲ್ಪಿಸುವ ಸಂಬಂಧ C&R ರಲ್ಲಿ ತಿದ್ದುಪಡಿ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ದಾಖಲೆ ಪ್ರಕಾರ 361 ಸರ್ಕಾರಿ ಪ್ರೌಢಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಇದ್ದು, 2018-19ನೇ ಸಾಲಿನಲ್ಲಿ ಪ್ರಥಮ ಪಿಯುಸಿ ಪ್ರಾರಂಭಕ್ಕೆ 2166ರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಪ್ರತಿ ಅತಿಥಿ ಉಪನ್ಯಾಸಕರುಗಳಿಗೆ ಮಾಸಿಕ ರೂ. 9000ದಂತೆ 10 ತಿಂಗಳಿಗೆ ರೂ. 19.50 ಕೋಟಿಗಳ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಕೋರಲಾಗಿತ್ತು.
ಆದರೆ, ಅದೇಕೋ ಖಾಸಗಿ ಶಿಕ್ಷಣ ಸಂಸ್ಥೆಗಳ ಕುಮ್ಮಕ್ಕಿನಿಂದಲೋ ಅಥವಾ ಅಧಿಕಾರಿಗಳ ನಿದ್ದೆಯಿಂದಲೋ ಆದೇಶ ಕಸದ ಬುಟ್ಟಿ ಸೇರಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮಾತ್ರ ಶಿಕ್ಷಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
PublicNext
08/09/2022 12:36 pm