ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಯಲ್ಲಿನ ದೊಡ್ಡ ಗುಂಡಿಗಳ ಫೋಟೊ ತೆಗೆದು ವಾಟ್ಸಾಪ್ ಮಾಡಿ, ಅದರಲ್ಲಿ ಆಯ್ಕೆಯಾದವರಿಗೆ ಬಹುಮಾನ ನೀಡಲಿದ್ದೇವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ಅಧ್ಯಕ್ಷ ಐವನ್ ಡಿಸೋಜ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ ಐವನ್ ಡಿಸೋಜಾ, 'ಸ್ಮಾರ್ಟ್ ಸಿಟಿ ಮಾದರಿ ರಸ್ತೆ, ಗುಂಡಿಗಳ ಸ್ಪರ್ಧೆ-2022' ಎಂದು ಈ ಸ್ಪರ್ಧೆಗೆ ಹೆಸರಿಡಲಾಗಿದೆ. ಆ.24ರಿಂದ ಆ.29ರ ಸಂಜೆ 5 ರವರೆಗೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಪ್ರದೇಶದ ಅತ್ಯಂತ ದೊಡ್ಡ ಮತ್ತು ಅಪಾಯಕಾರಿ ಗುಂಡಿಯನ್ನು(ಹೊಂಡ) ಗುರುತಿಸಲು ಮತ್ತು ಈ ಸ್ಪರ್ಧೆಯಲ್ಲಿ ಪ್ರಥಮ 5 ಸಾವಿರ, ದ್ವಿತೀಯ ಮೂರು ಸಾವಿರ ಹಾಗೂ ತೃತೀಯ 2 ಸಾವಿರ ರೂ.ಗಳನ್ನು ವಿವಿಧ ಸಂಘ ಸಂಸ್ಥೆಗಳ ಮೂಲಕ ನೀಡಲಾಗುತ್ತದೆ ಎಂದರು.
ಸಾರ್ವಜನಿಕರು ಗುಂಡಿಗಳನ್ನು ಗುರುತಿಸಿ, ಕಳುಹಿಸಿದ ಗುಂಡಿಗಳನ್ನು ಪರಿಶೀಲನೆಗೆ ವೀಕ್ಷಿಸಲು ಪರಿಣತರು ಮತ್ತು ಸಂಘಟಕರು ಸೇರಿ ಆ.30ರಂದು ಬೆಳಗ್ಗೆ 9 ಗಂಟೆಗೆ ಗುಂಡಿಗಳನ್ನು ಪರಿಶೀಲಿಸಲಿದ್ದಾರೆ. ಸಂಜೆ 3.30ಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯ ಮುಂದೆ ಮತ್ತು ಸ್ಮಾರ್ಟ್ ಸಿಟಿ ಕಚೇರಿಯ ಮುಂದೆ ಸಾರ್ವಜನಿಕವಾಗಿ ಬಹುಮಾನಗಳು ಗಣ್ಯ ವ್ಯಕ್ತಿಗಳ ಮೂಲಕ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಗುಂಡಿ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಈ 9731485875 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಗುರುತಿಸಿದ ಗುಂಡಿಗಳ ಚಿಕ್ಕ ವೀಡಿಯೊಗಳನ್ನು, ಫೋಟೊ ಹಾಗೂ ಜಿಪಿಎಸ್ ಲೊಕೇಶನ್ ಅನ್ನು ಕಳುಹಿಸಕೊಡಬೇಕು. ಮೂವರು ತೀರ್ಪುಗಾರರು ಈ ಚಿತ್ರಗಳನ್ನು ಪರಿಗಣಿಸಿ ಆಯ್ಕೆ ನೀಡಲಿದ್ದಾರೆ ಎಂದರು.
Kshetra Samachara
24/08/2022 10:44 pm