ಸುಳ್ಯ: ಸಂಸದರ ಆದರ್ಶ ಗ್ರಾಮ ಬಳ್ಪದಲ್ಲಿ ಐತಿಹಾಸಿಕ ಬೋಗಾಯನ ಕೆರೆಯ ಅಭಿವೃದ್ಧಿ ಕಾಮಗಾರಿಯು ನಡೆಯುತ್ತಿದ್ದು ಕಾಮಗಾರಿಯ ಬಗ್ಗೆ ಎದ್ದಿರುವ ಆರೋಪ ಸರಿಯಲ್ಲ ಎಂದು ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ರೂ.2 ಕೋಟಿ ವೆಚ್ಚದಲ್ಲಿ ಇತ್ತೀಚೆಗೆ ಆರಂಭಗೊಂಡಿದೆ. 365 ಮೀ ಉದ್ದವಿರುವ ಕೆರೆ ಇದಾಗಿದೆ.ಈಗಾಗಲೇ ಸುಮಾರು 20 ಮೀಟರ್ ಆಳ ಹೊಂದಿದೆ. ಅಲ್ಲದೆ ಸುಮಾರು 6000 ಟನ್ ಹೂಳನ್ನು ತೆಗೆಯಲಾಗಿದೆ. ಆದರೆ ಇದೀಗ ಸುರಿಯುತ್ತಿರುವ ಬಾರೀ ಮಳೆಯ ಕಾರಣದಿಂದ ಮತ್ತು ಅಧಿಕ ನೀರಿನ ಒರತೆಯಿಂದಾಗಿ ಕೆರೆಯ ದಂಡೆಗೆ ಹೊದಿಸಿದ್ದ ತಡೆಗೋಡೆಯ ಕಲ್ಲುಗಳು ಬಿದ್ದಿವೆ. ಇದಕ್ಕೆ ಕೆಲವರು ಆಪಾದನೆ ಮತ್ತು ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ. ನಿಜಾಂಶ ತಿಳಿಯದೆ ಆಪಾದನೆ ಮಾಡುವುದು ಖಂಡನೀಯ.
ಇಷ್ಟರ ತನಕ ಆಗದ ಕೆರೆಯ ಅಭಿವೃದ್ಧಿ ಕಾರ್ಯ ಇದೀಗ ನಡೆಯುತ್ತಿದೆ. ಅಭಿವೃದ್ಧಿಯನ್ನು ಕಂಡು ಸಹಿಸದವರು ಈ ರೀತಿಯ ಆಪಾದನೆಗಳನ್ನು ಮಾಡುತ್ತಿರುವುದು ಸರಿಯಲ್ಲತೀ ರೀತಿ ಆಗಿರುವುದು ಕಳಪೆ ಕಾಮಗಾರಿಯಿಂದಲ್ಲ ಬದಲಾಗಿ ಪ್ರಕೃತಿಕ ವೈಪರಿತ್ಯವು ಕಾರಣವಾಗಿದೆ. ತಕ್ಷಣ ಸಂಬಂಧಪಟ್ಟ ಅಭಿಯಂತರನ್ನು ಕರೆಸಿ ಇದಕ್ಕೆ ಕಾರಣ ಕೇಳಲಾಗಿದೆ.ಅಲ್ಲದೆ ಅವರು ಇದನ್ನು ಸಮರ್ಪಕಗೊಳಿಸುವ ಭರವಸೆ ನೀಡಿದ್ದಾರೆ. ಕೆರೆಯ ಕಾಮಗಾರಿ ಇನ್ನೂ ಸಂಪೂರ್ಣವಾಗಿಲ್ಲ. ಕಾಮಗಾರಿ ಆರಂಭಿಕ ಹಂತದಲ್ಲಿದ್ದು ನಡೆಯುತ್ತಿದೆ. ಅಲ್ಲದೆ ಕಾಮಗಾರಿಗೆ ಬಿಲ್ ಕೂಡಾ ಪಾವತಿ ಆಗಿಲ್ಲ ಎಂದು ವಿನೋದ್ ಬೇಸರ ವ್ಯಕ್ತಪಡಿಸಿದರು.
ಅನೇಕ ಅಭಿವೃದ್ಧಿ:
ಸಮೃದ್ಧಿಯ ಗ್ರಾಮವನ್ನಾಗಿಸುವುದು ಆದರ್ಶ ಗ್ರಾಮದ ಪರಿಕಲ್ಪನೆಯಾಗಿದೆ. ಈ ನಿಟ್ಟಿನಲ್ಲಿ ಬಳ್ಪದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ. ವಿದ್ಯುತ್ ವ್ಯವಸ್ಥೆ ಇಲ್ಲದ ಮನೆಗಳಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. 1.7 ಕೋಟಿ ವಿದ್ಯುತ್ ಪರಿವರ್ತಕವನ್ನು ಗ್ರಾಮದಲ್ಲಿ ಅಳವಡಿಸಲಾಗಿದೆ. ಅಲ್ಲದೆ ಹೊಸದಾಗಿ 5 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಶೀಘ್ರವೇ ಇನ್ನು 5 ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಸಂಸದರು ಬಳ್ಪವನ್ನು ಆದರ್ಶ ಗ್ರಾಮವನ್ನಾಗಿ ತೆಗೆದುಕೊಂಡ ಬಳಿಕ ಬಳ್ಪದ ಚಿತ್ರಣವೇ ಬದಲಾಗಿದೆ. ಉದ್ಯೋಗ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ.೩೫೦ ಮನೆಗಳಿಗೆ ಉಚಿತ ಗ್ಯಾಸ್ ಒದಗಿಸಲಾಗಿದೆ. ಗೋಬರ್ ಗ್ಯಾಸ್ ಘಟಕ ತೆರೆಯಲಾಗಿದೆ. ಶಾಲೆಗಳ ಅಭಿವೃದ್ಧಿ, ಬೋಲ್‌ವೆಲ್, ಕಿಂಡಿ ಅಣೆಕಟ್ಟು, ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.ರೂ.1 ಕೋಟಿ ವೆಚ್ಚದಲ್ಲಿ ನೀರಿನ ಟ್ಯಾಂಕಿ ನಿರ್ಮಿಸಲಾಗಿದೆ.76 ಶೌಚಾಲಗಳನ್ನು ನಿರ್ಮಿಸಿ ಕೊಡಲಾಗಿದೆ. ಬ್ಯಾಂಕ್ ಶಾಖೆ, ಸಹಕಾರಿ ಸಂಘದ ಶಾಖೆಯನ್ನು ತೆರೆಯಲಾಗಿದೆ. ಅಡ್ಡಬೈಲು-ಬೀದಿಗುಡ್ಡೆ-ಎಣ್ಣೆಮಜಲು-ಬೋಗಾಯನ ಕೆರೆ ರಿಂಗ್ ರಸ್ತೆಯು 9.5ಕೋಟಿ ವೆಚ್ಚದಲ್ಲಿ ನಿರ್ಮಿತವಾಗಿದೆ.ಮುಂದೆ ರೂ.10ಕೋಟಿ ವೆಚ್ಚದಲ್ಲಿ ಒಳ ರಸ್ತೆಗಳ ಅಭಿವೃದ್ಧಿ, 40 ಲಕ್ಷ ವೆಚ್ಚದಲ್ಲಿ ಕಿರು ಸೇತುವೆಗಳು ನಿರ್ಮಿತವಾಗಲಿದೆ.ಕೇನ್ಯ ಆರೋಗ್ಯ ಕೇಂದ್ರದ ಅಭಿವೃದ್ಧಿ ಮಾಡಲಾಗಿದೆ.ಕೇನ್ಯ ಅಂಗನವಾಡಿ, ಬಳ್ಪ ಹಿರಿಯ ಪ್ರಾಥಮಿಕ ಶಾಲೆ, ಶಿಶುಮಂದಿರ ಅಭಿವೃದ್ಧಿಯಾಗಿದೆ ಎಂದು ವಿನೋದ್ ಹೇಳಿದರು.
Kshetra Samachara
09/07/2022 09:54 pm