ವಿಶೇಷ ವರದಿ: ರಹೀಂ ಉಜಿರೆ
ಉಡುಪಿ:ಕೃಷ್ಣನಗರಿಯ ಹಲವೆಡೆ ಕಳೆದ ಕೆಲವು ದಿನಗಳಿಂದ ದಾರಿದೀಪಗಳು ಉರಿಯುತ್ತಿಲ್ಲ.ಇದರಿಂದಾಗಿ ರಾತ್ರಿ ವೇಳೆ ಅತ್ತಿಂದಿತ್ತ ಓಡಾಡುವ ಜನ ಪರದಾಡುವಂತಾಗಿದೆ.ವಾಹನ ಸವಾರರು ಮತ್ತು ಪಾದಚಾರಿಗಳು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಈಗ ಹಿಜಾಬ್ ವಿಷಯದಲ್ಲಿ ಸುದ್ದಿಯಲ್ಲಿದೆ.ಆದರೆ ಇದೇವೇಳೆ ನಗರ ಕತ್ತಲಲ್ಲಿ ಮುಳುಗಿದ್ದರೂ ಸ್ತಳೀಯಾಡಳಿತವಾಗಲೀ ಜನಪ್ರತಿನಿಧಿಗಳಾಗಲೀ ಕ್ಯಾರೇ ಎನ್ನುತ್ತಿಲ್ಲ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ 66 ಕರಾವಳಿ ಬೈಪಸ್ ನಿಂದ ಅಂಬಾಗಿಲು ಜಂಕ್ಷನ್ ತನಕ ದಾರಿದೀಪ ಕೆಟ್ಟುಹೋಗಿದ್ದು ಪಾದಚಾರಿಗಳು ಪರದಾಡುವಂತಾಗಿದೆ. ಅದರಲ್ಲೂ ಸಂಜೆ ನಂತರ ಅತ್ತಿಂದಿತ್ತ ಓಡಾಡುವ ಹೆಣ್ಣು ಮಕ್ಕಳು ಭಯಭೀತರಾಗಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದಲ್ಲದೆ ದಿನಂಪ್ರತಿ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ.
ಈ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಗಮನಸೆಳೆದರೂ ಪ್ರಯೋಜನವಾಗಿಲ್ಲ.ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ದಿನಂಪ್ರತಿ ದೊಂದಿ ಅಥವಾ ಚಿಮಣಿಯನ್ನು ಉರಿಸುವ ವಿಭಿನ್ನ ರೀತಿಯ ಪ್ರತಿಭಟನೆಗೆ ಚಾಲನೆ ನೀಡಿದೆ. ಸಮಸ್ಯೆ ಬಗೆಹರಿಯುವವರೆಗೆ ಪ್ರತಿದಿನ ಇದೇ ರೀತಿ ಚಿಮಣಿ ಅಥವಾ ದೊಂದಿ ಉರಿಸಿ ಪಾದಚಾರಿಗಳಿಗೆ ನಮ್ಮಿಂದಾಗುವಷ್ಟು ಬೆಳಕು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ಹೇಳಿದ್ದಾರೆ.
ನಗರದ ಜನರಿಗೆ ಮೂಲಭೂತ ಸೌಕರ್ಯವಾದ ದಾರಿದೀಪ ಒದಗಿಸುವುದು ನಗರಸಭೆಯ ಕರ್ತವ್ಯ. ಆದರೆ ಸಮಸ್ಯೆ ಬಗ್ಗೆ ಕುರುಡಾಗಿರುವ ನಗರಸಭೆ ವಿರುದ್ಧ ಜನಕ್ರೋಶ ಹೆಚ್ಚುತ್ತಿದೆ.
Kshetra Samachara
01/02/2022 06:06 pm