ಮಂಗಳೂರು: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಡಿಯಲ್ಲಿ ಮೀಸಲಿಟ್ಟಿರುವ ಅನುದಾನಗಳು ಸಮರ್ಪಕವಾಗಿ ಸದುದ್ದೇಶಕ್ಕೆ ಬಳಕೆಯಾಗಬೇಕು. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯವನ್ನು ತೋರದೆ ಕರ್ತವ್ಯ ನಿರ್ವಹಿಸಬೇಕೆಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ದ.ಕ.ಜಿಪಂ ಸಭಾಂಗಣದಲ್ಲಿ ಇಲಾಖೆಯ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಶಿಷ್ಟ ಜಾತಿಯ 28 ಲಕ್ಷ ಕುಟುಂಬಗಳ ಪೈಕಿ ಬಹುತೇಕ ಕುಟುಂಬವು ನಿವೇಶನ ವಂಚಿತವಾಗಿದೆ. ದ.ಕ.ಜಿಲ್ಲೆಯಲ್ಲೂ ಹಲವು ಮಂದಿ ನಿವೇಶನ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ವೆ ಕಾರ್ಯವನ್ನು ಕೈಗೆತ್ತಿಕ್ಕೊಳ್ಳಬೇಕು. ಆದ್ದರಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಪೈಕಿ ಎಷ್ಟು ಕುಟುಂಬ ನಿವೇಶನ ವಂಚಿತರಾಗಿದೆ ಎಂಬ ಸರ್ವೆ ಕಾರ್ಯ ನಡೆಸಿ ವರದಿಯನ್ನು ವಾರದೊಳಗೆ ಒಪ್ಪಿಸುವಂತೆ ಸಚಿವ ಕೋಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಿಎಂ ಈಗಾಗಲೇ ಘೋಷಿಸಿರುವಂತೆ ಬಿಪಿಎಲ್ ಕಾರ್ಡ್ ಹೊಂದಿರುವ 24.5 ಲಕ್ಷ ಮಂದಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯಲಿದೆ. ಇದರಿಂದ ನಮ್ಮ ಇಲಾಖೆಗೆ 640 ಕೋಟಿ ವೆಚ್ಚವಾಗಲಿದೆ. ಬಡವರ ಆರ್ಥಿಕ ಹಾಗೂ ಶೈಕ್ಷಣಿಕ ಸ್ವಾವಲಂಬನೆಯ ಹಿತದೃಷ್ಟಿಯಿಂದ ಜಾರಿಯಾಗಿರುವ ಈ ಮಹತ್ವಕಾಂಕ್ಷಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲೆಯ ಅಧಿಕಾರಿಗಳು ವಿಶೇಷ ಒತ್ತು ನೀಡಬೇಕು. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಸಂಪೂರ್ಣವಾಗಿ ಯಶಸ್ವಿನಿ ಯೋಜನೆಯಡಿ ಯಾವ ರೀತಿಯಾಗಿ ತರಲು ಸಾಧ್ಯ ಎಂಬ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಸಚಿವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
Kshetra Samachara
30/05/2022 10:50 pm