ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಈ ಕುಗ್ರಾಮದ ಜನರ ಬದುಕೇ ತಂತಿ ಮೇಲಿನ ನಡಿಗೆ!

ಬೈಂದೂರು ವಿಧಾನಸಭೆ ಕ್ಷೇತ್ರ ರಾಜ್ಯದಲ್ಲೇ ಕುಗ್ರಾಮಗಳ ಪಟ್ಟಿಗೆ ಸೇರಿದ ಊರು. ಬೆಟ್ಟ, ಗುಡ್ಡ ನದಿಗಳಿಂದ ಆವೃತವಾದ ಈ ಊರಲ್ಲಿ ಇವತ್ತಿಗೂ ಮೂಲಭೂತ ಸೌಕರ್ಯ ಮರೀಚಿಕೆಯಾಗಿಯೇ ಉಳಿದಿದೆ! ಮಳೆಗಾಲದಲ್ಲಿ ಹೊಳೆ ದಾಟಿ ಹೋಗಿ ವಾಪಸ್ ಮನೆಗೆ ಬರೋದೇ ಈ ಗ್ರಾಮಸ್ಥರಿಗೊಂದು ಸಾಹಸದ ಕೆಲಸ!

ಇನ್ನು, ಮಳೆಗಾಲ ಬಂತೆಂದರೆ ಇವರ ಪಾಡು ಹೇಳತೀರದು. ಗ್ರಾಮದ 15 ಕುಟುಂಬಗಳು ಕಾಲು ಸೇತುವೆ ಇಲ್ಲದೆ ಸಣ್ಣ ಮರದ ಸೇತುವೆಯಲ್ಲೇ ಅತ್ತಿಂದಿತ್ತ ಸಂಚರಿಸಬೇಕಾಗಿದೆ. ಮೊನ್ನೆಯ ಧಾರಾಕಾರ ಮಳೆಗೆ ಇವರು ಅಕ್ಷರಶಃ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಅತ್ತಿಂದಿತ್ತ ಸಂಚರಿಸುವ ಪರಿಸ್ಥಿತಿ ಬಂದಿತ್ತು. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಎತ್ತಾಬೇರು ಗ್ರಾಮ ಎಲ್ಲ ವಿಷಯದಲ್ಲೂ ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯಕ್ಕೊಳಗಾದ ಕುಗ್ರಾಮ. ಬೈಂದೂರು ಪಟ್ಟಣದಿಂದ ಕೇವಲ 8 ಕಿಲೋ ಮೀಟರ್ ದೂರದಲ್ಲಿರುವ ಯತ್ತಾಬೇರು ಗ್ರಾಮಸ್ಥರು, ತಮಗೊಂದು ಸೇತುವೆ ಮಾಡಿ ಕೊಡಿ ಎಂದು ದಶಕಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ.

ಊರವರಿಗೆ ಸಣ್ಣಪುಟ್ಡ ಅನಾರೋಗ್ಯವಾದರೆ ಆಸ್ಪತ್ರೆಗೆ ಸಾಗಿಸಲು ಹೊಳೆ ನೀರಿನಲ್ಲಿ ಹೊತ್ತುಕೊಂಡೇ ಸಾಗಬೇಕಾಗಿದೆ. ಇಲ್ಲಿನ ಹಲವು ಮಕ್ಕಳು ಶಾಲೆ- ಕಾಲೇಜಿಗೆ ಹೋಗುತ್ತಾರೆ. ಪುಟ್ಟ ಮಕ್ಕಳು ತಂತಿ ಮೇಲೆ ನಡೆದಂತೆ ಈ ಹೊಳೆ ದಾಟಬೇಕು. ಗಾಳಿ, ಮಳೆ ಅಥವಾ ನೆರೆ ಬಂದಾಗ ಈ ಮಕ್ಕಳ ಪಾಡು ಹೇಳತೀರದು. ನಮಗೊಂದು ಸೇತುವೆ ಮಾಡಿಕೊಟ್ಟರೆ ತುಂಬಾ ಅನುಕೂಲ ಆಗುತ್ತೆ. ನಮ್ಮೂರಲ್ಲಿ ಕರೆಂಟ್ ಕೂಡ ಇಲ್ಲ. ಮೂಲ ಸೌಕರ್ಯವೂ ಇಲ್ಲ ಅಂತಾರೆ ಗ್ರಾಮದ ಈ ವಿದ್ಯಾರ್ಥಿನಿ.

ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ಇನ್ನಾದರೂ ಇತ್ತ ಕಡೆ ಗಮನ ಹರಿಸಬೇಕು. ಗ್ರಾಮಸ್ಥರಿಗೆ ತುಂಬಾ ದೊಡ್ಡ ಮಟ್ಟದಲ್ಲಲ್ಲದಿದ್ದರೂ ಸಣ್ಣ ಬಜೆಟ್ ನಲ್ಲೇ ಗಟ್ಟಿಮುಟ್ಟಾದ ಸೇತುವೆ ನಿರ್ಮಿಸಿಕೊಡಬೇಕು. ದಶಕಗಳಿಂದ ಹೊಳೆಯಲ್ಲಿಯೇ ನಡೆದು ಸಾಗಬೇಕಾದ ದಯನೀಯ ಸ್ಥಿತಿಯಿಂದ ಈ ಗ್ರಾಮಸ್ಥರಿಗೆ ಮುಕ್ತಿ ದೊರಕಿಸಿ ಕೊಡಬೇಕು.

ವಿಶೇಷ ವರದಿ: ರಹೀಂ ಉಜಿರೆ

Edited By :
PublicNext

PublicNext

14/07/2022 03:21 pm

Cinque Terre

41.25 K

Cinque Terre

2

ಸಂಬಂಧಿತ ಸುದ್ದಿ