ಉಡುಪಿ: ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಶ್ರೀಮಧ್ವಶಂಕರ ವಿಮಾನ ನಿಲ್ದಾಣವೆಂದು ನಾಮಕರಣ ಮಾಡುವುದು ಅತ್ಯಂತ ಅರ್ಥಪೂರ್ಣ, ಅಪೂರ್ವ ಮತ್ತು ಮೌಲಿಕವೆನಿಸುತ್ತದೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ಶ್ರೀಪಾದರು ಪ್ರತಿಪಾದಿಸಿದ್ದಾರೆ.
ಆಯೋಧ್ಯೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಮಾನ ನಿಲ್ದಾಣ ಮೂಡಿಬಂದಂತೆ, ದಾರ್ಶನಿಕ ಆಚಾರ್ಯರುಗಳ ನೆಲೆವೀಡಾದ
ದಕ್ಷಿಣ ಭಾರತದ ವಿಮಾನ ನಿಲ್ದಾಣಕ್ಕೆ ಶ್ರೀಮಧ್ವಶಂಕರರ ನಾಮಕರಣ ಭಾರತದ ದಾರ್ಶನಿಕ ಪರಂಪರೆಗೆ ಗೌರವ ಸಲ್ಲಿಸಿದಂತಾಗುವುದು ಎಂದು ಶ್ರೀಗಳು ಹೇಳಿದ್ದಾರೆ.
ಇದರಿಂದ ಜಗತ್ತಿನಲ್ಲಿ ಧರ್ಮಪ್ರಚಾರಕ್ಕೆ ಅದು ಪೂರಕವೂ ಆಗುವುದಲ್ಲದೆ, ಭಾವೈಕ್ಯಕ್ಕೂ ಇಂಬು ನೀಡುತ್ತದೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಚಿಂತನೆ ನಡೆಸಿದಾಗ ಜಗತ್ತಿಗೆ ಇದೀಗ ಆಧ್ಯಾತ್ಮಿಕ ಆಂದೋಲನದ ಆವಶ್ಯಕತೆ ಬಹುವಾಗಿ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಧ್ಯಾತ್ಮಿಕತೆಗೆ ಸರಕಾರಗಳು ಹೆಚ್ಚಿನ ಒತ್ತು ನೀಡುವ ದೃಷ್ಟಿಯಲ್ಲೂ ಶ್ರೀಮಧ್ವಶಂಕರ ವಿಮಾನ ನಿಲ್ದಾಣದ ನಾಮಕರಣ ಅತಿ ಸೂಕ್ತ ಹಾಗೂ ಸಂದರ್ಭೋಚಿತವೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
Kshetra Samachara
26/11/2020 06:46 pm