ಮುಲ್ಕಿ: ಸುರತ್ಕಲ್ ನ ಇಡ್ಯಾ, ಗುಡ್ಡೆಕೊಪ್ಲದ ಬಳಿ ಸುರತ್ಕಲ್ ನಗರ ಭಾಗದಲ್ಲಿರುವ ಕೆಲವು ಖಾಸಗಿ ಅಪಾರ್ಟ್ ಮೆಂಟ್ ಗಳ ಕೊಳಚೆ ನೀರನ್ನು ಪೈಪ್ ಮುಖಾಂತರ ಇಡ್ಯಾ, ಗುಡ್ಡೆಕೊಪ್ಲ ಪ್ರದೇಶದ ಕಡಲ ತೀರಕ್ಕೆ ನೇರವಾಗಿ ಬಿಡಲಾಗುತ್ತಿದ್ದು, ಇದರಿಂದ ಪರಿಸರ ಕಲುಷಿತಗೊಳ್ಳುತ್ತಿದೆ.
ರಾತ್ರೋ ರಾತ್ರಿ ಈ ಕೊಳಚೆ ನೀರಿನ ಪೈಪ್ ನ್ನು ಇಲ್ಲಿನ ಮನೆ ಗಳ ಸಮೀಪದಲ್ಲಿಯೇ ಸಮುದ್ರ ತೀರದ ಡಾಮರು, ಕಾಂಕ್ರೀಟ್ ರಸ್ತೆ ನಡುವೆ ಕೊರೆದು ಬಳಿಕ ತಿಳಿಯದಂತೆ ರಸ್ತೆ ಉಬ್ಬು ನಿರ್ಮಿಸಿ ಸಮುದ್ರ ಕಿನಾರೆಯ ತೋಡುಗಳಿಗೆ ಬಿಡಲಾಗುತ್ತಿದೆ.
ಈ ಬಗ್ಗೆ ಸ್ಥಳೀಯರು ಜನಪ್ರತಿನಿಧಿಗಳಿಗೆ, ಮನಪಾಗೆ ದೂರು ನೀಡಿದನ್ವಯ ಬುಧವಾರ ಮೇಯರ್ ದಿವಾಕರ್ ಪಾಂಡೇಶ್ವರ್ ಇಡ್ಯಾ ಪರಿಸರಕ್ಕೆ ಭೇಟಿ ನೀಡಿದರು.
ಇಡ್ಯಾ, ಗುಡ್ಡೆಕೊಪ್ಲ ನಾಗರಿಕರು ಸಮುದ್ರಕ್ಕೆ ಬಿಡುವ ಕೊಳಚೆ ನೀರಿನ ಪೈಪ್ ಸಂಪರ್ಕ ಹಾಗೂ ಹರಿಯಬಿಡುವ ನೀರನ್ನು ಹಾಗೂ ರಸ್ತೆ ಅಗೆದು ಉಬ್ಬು ನಿರ್ಮಿಸಿದ್ದನ್ನು ಇಡ್ಯಾ ಗುಡ್ಡೆಕೊಪ್ಲ ನಾಗರಿಕ ಹೋರಾಟ ಸಮಿತಿ ಸದಸ್ಯರು ಹಾಗೂ ಸ್ಥಳೀಯರು ಮೇಯರ್ ಗೆ ತಿಳಿಸಿ ಅದನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಮೇಯರ್ ಬಳಿಕ ಸ್ಥಳೀಯ ಮನಪಾ ಅಧಿಕಾರಿಗಳಿಗೆ ತತ್ ಕ್ಷಣವೇ ಈ ಎಲ್ಲ ಅಕ್ರಮ ಪೈಪ್ ಗಳ ಸಂಪರ್ಕ ತೆಗೆಸಿಬಿಡಬೇಕು.
ಅಲ್ಲದೆ, ರಸ್ತೆ ಉಬ್ಬನ್ನು ಕೂಡ ತೆಗೆದು ಹಾಕುವಂತೆ ಸೂಚಿಸಿದರು. ಅದರಂತೆ ಅಧಿಕಾರಿಗಳು ಮಧ್ಯಾಹ್ನದ ಒಳಗೆ ರಸ್ತೆ ಉಬ್ಬು ತೆಗೆದಿದ್ದು ಸಮುದ್ರಕ್ಕೆ ಬಿಡುವ ಕೊಳಚೆ ನೀರಿನ ಪೈಪ್ ಸಂಪರ್ಕ ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ.
ಉಪಮೇಯರ್ ವೇದಾವತಿ ಕುಳಾಯಿ, ಸ್ಥಳೀಯ ಕಾರ್ಪೊರೇಟರ್ ನಯನಾ ಆರ್. ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್ ಹಾಗೂ ಗುಡ್ಡೆಕೊಪ್ಲ, ಇಡ್ಯಾ ಸುರತ್ಕಲ್ ನಾಗರಿಕ ಹೋರಾಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
14/10/2020 10:32 pm