ಉಳ್ಳಾಲ: ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರನ್ನ ರೋಗಿಗಳಂತೆ ಮಲಗಿಸಿ ಮಜೂರಿ ನೀಡದೆ ವಂಚಿಸಿರುವುದರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಂತಹ ಗಂಭೀರ ಮೆಡಿಕಲ್ ಮಾಫಿಯಾದ ವಿರುದ್ಧ ಸಿಬಿಐ ತನಿಖೆ ನಡೆಯಬೇಕೆಂದು ಸಾಮಾಜಿಕ ಕಾರ್ಯಕರ್ತ ಶಶಿಧರ್ ಶೆಟ್ಟಿ ಆಗ್ರಹಿಸಿದ್ದಾರೆ.
ಮಂಗಳೂರಿನ ಕಾವೂರಲ್ಲಿ ಬಿಡಾರ ಹೂಡಿರುವ ಉತ್ತರ ಕರ್ನಾಟಕ ಮೂಲದ ಕಟ್ಟಡ ಕಾಮಗಾರಿ ಕೂಲಿ ಕಾರ್ಮಿಕರನ್ನ ಕಳೆದ ಆಗಸ್ಟ್ 10ರಂದು ಮಧ್ಯವರ್ತಿಗಳಾದ ಪ್ರಸನ್ನ ಶೆಣೈ , ಬಸವರಾಜ್, ಲಕ್ಷ್ಮಿ ಎಂಬವರು ಕಣಚೂರು ಆಸ್ಪತ್ರೆಯ ಬಸ್ಸಿನಲ್ಲಿ ಸಣ್ಣ ಮಕ್ಕಳನ್ನೂ ಸೇರಿಸಿ ಒಟ್ಟು ನೂರು ಮಂದಿಯನ್ನ ದಿವಸಕ್ಕೆ ತಲೆಗೆ ಒಂದು ಸಾವಿರ ಸಂಬಳ ಕೊಟ್ಟು ಕೆಲಸ ಕೊಡಿಸೋದಾಗಿ ಕೊಂಡೊಯ್ದು ಆಸ್ಪತ್ರೆಯಲ್ಲಿ ಮಲಗಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಕಣಚೂರು ಆಸ್ಪತ್ರೆಗೆ ಹೋದ ಕೂಲಿ ಕಾರ್ಮಿಕರಿಗೆ ಆಸ್ಪತ್ರೆಯ ಕಾರ್ಡ್ ಕೊಟ್ಟು, ಕೈ , ಕಾಲುಗಳಿಗೆ ಬ್ಯಾಂಡೇಜ್ ಸುತ್ತಿಸಿ ಬೆಡ್‌ನಲ್ಲಿ ರೋಗಿಗಳಂತೆ ಹತ್ತು ದಿವಸ ಮಲಗುವುದಲ್ಲದೆ, ಕೆಲವರಲ್ಲಿ ತಮಗೆ ಬಿಪಿ, ಶುಗರ್ ಇದೆ ಎಂದು ಸುಳ್ಳು ಹೇಳುವಂತೆ ಮಧ್ಯವರ್ತಿಗಳು ಸೂಚಿಸಿದ್ದರು ಎನ್ನಲಾಗಿದೆ.
ಸಣ್ಣ ಮಕ್ಕಳನ್ನ ಪ್ರತ್ಯೇಕ ವಾರ್ಡ್‌ಲ್ಲಿ ಮಲಗಿಸಿದ್ದರು. ಆಗಸ್ಟ್ 21 ರಂದು ಕಾರ್ಮಿಕರಿಗೆ ತಲಾ 4 ಸಾವಿರ ರೂಪಾಯಿಗಳನ್ನ ಕೊಟ್ಟು ಕಳುಹಿಸಿದ್ದು ಬಾಕಿ ಇದ್ದ 6 ಸಾವಿರ ಹಣವನ್ನ ನೀಡದೆ ವಂಚಿಸಿದ್ದಾರೆ. ಸಂತ್ರಸ್ತ ಕೂಲಿ ಕಾರ್ಮಿಕರು ದಿಕ್ಕು ಕಾಣದೆ ಬುಧವಾರ ಸಂಜೆ ಉಳ್ಳಾಲ ಠಾಣೆಗೆ ವಂಚಕರ ವಿರುದ್ಧ ದೂರು ನೀಡಲು ತೆರಳಿದ್ದರು. ಆದರೆ ಠಾಣೆಯ ಪಿಎಸ್ ಐ ಪ್ರದೀಪ್ ಅವರು ಅಮಾಯಕ ಕೂಲಿ ಕಾರ್ಮಿಕರನ್ನ ಠಾಣೆಯಿಂದ ಹೊರಗಟ್ಟಿ ದರ್ಪ ಮೆರೆದಿದ್ದರು. ನೊಂದ ಕೂಲಿ ಕಾರ್ಮಿಕರಿಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಿಯಾಝ್ ಎಂಬವರು ರಾತ್ರಿ ಉಳಿಯಲು ಜಾಗ, ಊಟ, ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು.
ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ನಿಂತ ಶಶಿಧರ್ ಶೆಟ್ಟಿ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ತಪ್ಪಿತಸ್ಥರ ವಿರುದ್ಧ ಕೂಲಿ ಕಾರ್ಮಿಕರಿಂದಲೇ ದೂರು ದಾಖಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಮೆಡಿಕಲ್ ಕಾಲೇಜುಗಳು ಕೂಲಿ ಕಾರ್ಮಿಕರನ್ನ ಆಸ್ಪತ್ರೆಯಲ್ಲಿ ಮಲಗಿಸಿ ಅವರನ್ನ ಐ.ಎಂ.ಎ ಸಂದರ್ಶನ ವೇಳೆ ರೋಗಿಗಳಂತೆ ತೋರಿಸಿ ತಮ್ಮ ಮೆಡಿಕಲ್ ಸೀಟ್ ಗಳನ್ನ ಜಾಸ್ತಿ ಮಾಡುವ ದಂಧೆ ವಿರುದ್ಧ ಈ ಹಿಂದೆಯೇ ಧ್ವನಿ ಎತ್ತಿದ್ದೆ. ಇದೀಗ ಉಳ್ಳಾಲದಲ್ಲಿ ಅದು ಸಾಕ್ಷ್ಯ ಸಮೇತ ಸಾಬೀತಾಗಿದೆ. ಇದು ಸಣ್ಣ ವಿಚಾರ ಅಲ್ಲ, ಈ ಬಗ್ಗೆ ತಾನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು ಹಗರಣದ ಬಗ್ಗೆ ಸಿಬಿಐ ತನಿಖೆ ಆಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ನೂರು ಕೂಲಿ ಕಾರ್ಮಿಕರಿಗೆ ಒಟ್ಟು 6 ಲಕ್ಷ ರೂಪಾಯಿ ಮಜೂರಿ ನೀಡದೆ ಸತಾಯಿಸಿದ ಐನಾತಿಗಳ ವಿರುದ್ಧ ಇದೀಗ ಸಂತ್ರಸ್ತರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿ ಮತ್ತೆ ತಮ್ಮ ಬಿಡಾರ ಕಾವೂರಿಗೆ ತೆರಳಿದ್ದಾರೆ.
PublicNext
02/09/2022 12:34 pm