ಉಡುಪಿ: ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರನ್ನು ಭೇಟಿ ಮಾಡಿದ ಪ್ರಮೋದ್ ಮುತಾಲಿಕ್ ಶ್ರೀಗಳೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದರು.ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಬಗ್ಗೆ ಮಾತುಕತೆ ನಡೆದಿದ್ದು ಕಾರ್ಯಕರ್ತರಿಗೆ ಟಿಕೆಟ್ ಸಿಗುವಂತೆ ನಾಯಕರ ಮನವೊಲಿಸಲು ಪೇಜಾವರ ಶ್ರೀಗಳಿಗೆ ಮುತಾಲಿಕ್ ಒತ್ತಾಯ ಮಾಡಿದ್ದಾರೆ.
ಬಳಿಕ ಮಾತನಾಡಿದ ಪ್ರಮೋದ್ ಮುತಾಲಿಕ್, ಈ ಬಾರಿಯ ಚುನಾವಣೆಯಲ್ಲಿ 25 ಸ್ಥಾನ ಹಿಂದೂ ಕಾರ್ಯಕರ್ತರಿಗೆ ನೀಡಬೇಕು.
ಕಾರ್ಯಕರ್ತರು ಶಾಸಕರಾಗಿ ಆಯ್ಕೆಯಾದರೆ ಹಿಂದುತ್ವದ ಬಗ್ಗೆ ಧ್ವನಿ ಎತ್ತುತ್ತಾರೆ.ಬಿಜೆಪಿಯಲ್ಲಿ ಹಿಂದುತ್ವದ ಕಾಳಜಿಯ ಕೊರತೆ ಇದೆ.ಈ ತೊಂದರೆ ನಿವಾರಿಸಲು ಈ 25 ಮಂದಿಯಿಂದ ಸಾಧ್ಯ.ಈ ಬಗ್ಗೆ ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಆಗ್ರಹಿಸುತ್ತೇನೆ.ಬಿಜೆಪಿ ಟಿಕೆಟ್ ಕೇಳುವುದು ನಮ್ಮ ಹಕ್ಕು.ಬಿಜೆಪಿ ಪಕ್ಷದ ಸಲುವಾಗಿ ನಾವು ಬೆವರು ರಕ್ತ ಸುರಿಸಿದ್ದೇವೆ.ಕಾರ್ಯಕರ್ತರ ಈ ಬೇಡಿಕೆಯನ್ನು ಪಕ್ಷ ಪೂರೈಸಲೇಬೇಕು.ಈ ಬಗ್ಗೆ ಪೇಜಾವರ ಶ್ರೀಗಳ ಗಮನ ಸೆಳೆದಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಹೊರತಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ನಿರ್ಧಾರ ಮಾಡಿಲ್ಲ.ಬಿಜೆಪಿಯವರು ಟಿಕೆಟ್ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸವಿದೆ.ಟಿಕೆಟ್ ಕೊಡದೆ ಇದ್ದರೆ ಆಯ್ತು ..ನಿಮ್ಮ ಹಣೆಬರಹ ಏನಿದಿಯೋ ಅನುಭವಿಸಿ.
ಇತ್ತೀಚೆಗೆ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ರಾಜ್ಯದ ಎಲ್ಲರಿಗೂ ಅಸಮಾಧಾನ ಉಂಟಾಗಿದೆ.ಈ ಅಸಮಾಧಾನವನ್ನು ಸರಿಯಾದ ನಿಟ್ಟಿನಲ್ಲಿ ತೆಗೆದುಕೊಂಡು ಹೋಗಲು ನಾವು 25 ಮಂದಿಗೆ ಅವಕಾಶ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.
PublicNext
21/09/2022 04:46 pm