ಉಡುಪಿ: ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣರಿಂದ ಕಮಿಷನ್ ಆರೋಪ ವಿಚಾರವಾಗಿ ಉಡುಪಿಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಬಹಿರಂಗವಾಗಿ ಹೇಳಿ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಆರೋಪ ಮಾಡುವ, ತನಿಖೆಗೆ ಆಗ್ರಹಿಸುವ ಅಧಿಕಾರ ಇದೆ. ಆದರೆ, ಸರ್ಕಾರದ ಮೇಲೆ ಆರೋಪ ಮಾಡುವಾಗ, ವಿರೋಧ ಪಕ್ಷದ ನಾಯಕರ ಬಳಿ ಹೋಗಿ ದೂರು ಕೊಡುವುದು ಎಷ್ಟು ಸರಿ? ಹೈಕೋರ್ಟಿನಲ್ಲೂ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಬಹುದು. ಬೇಕಿದ್ದರೆ ಲೋಕಾಯುಕ್ತಕ್ಕೆ ದೂರು ಕೊಟ್ಟು ತನಿಖೆಗೆ ಒತ್ತಾಯಿಸಿ. ನಿರ್ದಿಷ್ಟ ವಿಚಾರಗಳಿದ್ದರೆ ದಾಖಲೆ ಸಹಿತ ಆರೋಪಿಸಿ. ಆದರೆ, ಸರಕಾರದ ಮೇಲೆ ಈ ರೀತಿ ಗೂಬೆ ಕೂರಿಸುವುದು ಸರಿಯಲ್ಲ ಎಂದರು.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ನಮ್ಮ ಇಲಾಖೆಯ ವಸತಿ ಶಾಲಾ ಕಟ್ಟಡದ ಹಣ ಪಾವತಿ ಬಾಕಿ ಇದೆ ಎಂದು ಹೇಳಿದ್ದಾರೆ. ಸುಮಾರು 1100 ಕೋಟಿ ರೂ. ನೀಡಲು ಬಾಕಿ ಇದೆ, ನಿಜ. ಕೊರೊನಾದಿಂದ ಉಂಟಾಗಿರುವ ಎರಡು ವರ್ಷಗಳ ಆರ್ಥಿಕ ಕೊರತೆಯಿಂದ ಬಾಕಿ ಇರಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ 700 ಕೋಟಿ ನೀಡಲಾಗಿದೆ. ಈಗಾಗಲೇ 110 ಕೋಟಿಗಳ ಎರಡು ಕಂತು ಹಣ ಬಿಡುಗಡೆಯಾಗಿದೆ. ಜೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ನನ್ನ ಇಲಾಖೆಯಲ್ಲಿ 40%- 50% ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ತೋರಿಸಿ. ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಬದಲಾಗಿ ಗೊಂದಲ ಮೂಡಿಸಲಾಗುತ್ತಿದೆ. ಕೆಂಪಣ್ಣ ಸೇರಿದಂತೆ ಉಳಿದವರೆಲ್ಲರೂ ಈ ಬಗ್ಗೆ ಆಲೋಚಿಸಲಿ. ನಿಮಗೆ ನ್ಯಾಯ ಸಿಗೋದು ಎಲ್ಲಿ ವಿರೋಧ ಪಕ್ಷ ನಾಯಕರ ಮನೆಯಂಗಳದಲ್ಲಾ? ವಿನಾಕಾರಣ 100%, 50% ಎಂದು ಆರೋಪಿಸಬೇಡಿ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಈಗಾಗಲೇ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ತನಿಖೆಯಲ್ಲಿ ಈಶ್ವರಪ್ಪ ನಿರ್ದೋಷಿ ಎಂದು ಹೇಳಲಾಗಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಕುಟುಂಬದವರಿಗೆ ಅವಕಾಶ ಇದೆ. ನಾನು ಮತ್ತೊಮ್ಮೆ ನಿರ್ದೋಷಿಯಾಗಿ ಹೊರ ಬರುತ್ತೇನೆ ಎಂದು ಈಶ್ವರಪ್ಪ ಈಗಾಗಲೇ ಹೇಳಿದ್ದಾರೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಕೋಟ ತಿಳಿಸಿದರು.
PublicNext
25/08/2022 01:23 pm