ಮುಲ್ಕಿ: ಕಿನ್ನಿಗೋಳಿ ಸಮೀಪದ ಬಳ್ಕುಂಜೆ , ಕೊಲ್ಲೂರು, ಉಳೆಪಾಡಿ ವಲಯದಲ್ಲಿ ಕೈಗಾರಿಕೆಗಾಗಿ ಭೂಸ್ವಾಧೀನ ಪ್ರಕ್ರಿಯೆ ತೆರೆಮರೆಯಲ್ಲಿ ನಡೆಯುತ್ತಿದ್ದು ಸೋಮವಾರ ಕೊಲ್ಲೂರು ಗ್ರಾಮದ ದೇವರಬೆನ್ನಿಯಲ್ಲಿ ಸರ್ವೆ ನಡೆಸಲು ಬಂದ ಕೆಐಡಿಬಿ ಅಧಿಕಾರಿಗಳ ತಂಡವನ್ನು ಗ್ರಾಮಸ್ಥರು ಆಕ್ಷೇಪಿಸಿ ವಾಪಾಸು ಕಳುಹಿಸಿದ್ದಾರೆ.
ಭೂಸ್ವಾಧೀನ ಅಧಿಕಾರಿಗಳ ನಾಲ್ಕೈದು ಮಂದಿಯ ತಂಡ ಸರ್ವೆ ನಡೆಸಲು ಬಂದಿದ್ದಾಗ ಆಕ್ಷೇಪಿಸಿದ ಮೂವತ್ತಕ್ಕೂ ಹೆಚ್ಚು ಮಂದಿ ಸ್ಥಳೀಯ ಕೃಷಿಕರು" ನಾವು ಭೂಮಿ ನೀಡುವುದಿಲ್ಲ. ಹಾಗಾಗಿ ನಿಮ್ಮ ಸರ್ವೇ ಅಗತ್ಯವಿಲ್ಲ" ಎಂದು ಹೇಳಿದರು.
ಕೊಲ್ಲೂರಿನ ಗ್ರಾಮಸ್ಥರು ಹಾಗೂ ಕೃಷಿಕರು ಕೆಐಡಿಬಿ ನೀಡಿದ ನೋಟೀಸಿಗೆ ಆಕ್ಷೇಪ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಕ್ರಿಯೆ ಮುಗಿಯುವ ಮೊದಲು ಸರ್ವೇ ಮಾಡುವ ಅವಸರ ಯಾಕೆ? ಎಂದು ಗ್ರಾಮಸ್ಥರು ಆಕ್ಷೇಪಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಆನಂದ, ಸದಸ್ಯರಾದ ಸುಜಾತಾ, ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್, ಹೋರಾಟ ಸಮಿತಿಯ ಡೇನಿಸ್ ಡಿಸೋಜ, ಡಾ. ಫ್ರೀಡಾ ರೋಡ್ರಿಗಸ್, ದೇವದಾಸ ಮಲ್ಯ, ವಿನ್ಸೆಂಟ್, ಯಲ್ಲಪ್ಪ ಸಾಲ್ಯಾನ್, ಐತಪ್ಪ ಸಾಲ್ಯಾನ್ ಮುಂತಾದವರಿದ್ದರು.
ಕಳೆದ ಕೆಲದಿನಗಳಿಂದ ಕೆಐಎಡಿಬಿ ಅಧಿಕಾರಿಗಳು ಭೂಸ್ವಾಧೀನಕ್ಕಾಗಿ ಬೆದರಿಕೆ ತಂತ್ರ ಅನುಸರಿಸುತ್ತಿದ್ದು ಸ್ಥಳೀಯರು ಯಾವುದೇ ಬೆದರಿಕೆಗೆ ಮಣಿಯದೇ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
Kshetra Samachara
20/06/2022 08:37 pm