ಕಿಲ್ಪಾಡಿ: ದ.ಕ. ಜಿಪಂ, ಮಂಗಳೂರು ತಾಪಂ ಹಾಗೂ ಕಿಲ್ಪಾಡಿ ಪಂಚಾಯತ್ ನ "ನಮ್ಮ ಗ್ರಾಮ- ನಮ್ಮ ಯೋಜನೆ ಗ್ರಾಮ ಸಭೆ" ನಡೆಯಿತು. ಪಂ. ಉಪಾಧ್ಯಕ್ಷ ಗೋಪಿನಾಥ ಪಡಂಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂ. ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು, ಭೂ ಮಾಫಿಯಾ ಅಂಗರಗುಡ್ಡೆಯಲ್ಲಿ ಪಂ. ಕಟ್ಟಡಕ್ಕೆ ಮೀಸಲಿಟ್ಟ ಸರಕಾರಿ ಜಾಗ ಒತ್ತುವರಿಗೆ ಹುನ್ನಾರ ನಡೆಸುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೃಷಿ ಅಧಿಕಾರಿ ಅಬ್ದುಲ್ ಬಷೀರ್ ಕೃಷಿ ಸವಲತ್ತಿನ ಮಾಹಿತಿ ನೀಡಿದರು. ಈ ವೇಳೆ ಭತ್ತ ಕಟಾವು ಮೆಷಿನ್, ಕೆರೆ ಅಭಿವೃದ್ಧಿ, ಕಿಂಡಿ ಅಣೆಕಟ್ಟಿನ ಹಲಗೆ ಹಾಕಲು ಅನುದಾನ ಬಗ್ಗೆ ಸದಸ್ಯ ರಾಜೇಶ್ ಶೆಟ್ಟಿ, ಮಾಜಿ ಸದಸ್ಯ ಶರೀಫ್ ಕಿಲ್ಪಾಡಿ ಪ್ರಶ್ನಿಸಿದರು.
ಶಿಕ್ಷಣ ಇಲಾಖೆಯ ಪುಷ್ಪಲತಾ, ಕೆಮ್ರಾಲ್ ಆರೋಗ್ಯ ಕೇಂದ್ರದ ಸುಮಾ, ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಸುಲೋಚನಾ ಮಾಹಿತಿ ನೀಡಿದರು.
ಕೆರೆಕಾಡು ಕೋರ್ದಬ್ಬು ದೈವಸ್ಥಾನ ಬಳಿ ಬಾವಿಕಟ್ಟೆಯಲ್ಲಿ ಪುಂಡರು ಮದ್ಯ ಸೇವಿಸಿ ದಾಂಧಲೆ ಮಾಡುತ್ತಿದ್ದಾರೆ, ಇವರನ್ನು ನಿಯಂತ್ರಿಸಿ ಎಂದು ಗ್ರಾಮಸ್ಥ ಶಂಕರ್ ಆಗ್ರಹಿಸಿದರು. ಕೆಂಚನಕೆರೆ ತಿರುವು ಬಳಿ ತ್ಯಾಜ್ಯ ತೆರವು, ದಾರಿದೀಪ ಬಗ್ಗೆ ಚರ್ಚೆ ನಡೆಯಿತು. ಹೆದ್ದಾರಿ ಬದಿ ಇದ್ದ ತ್ಯಾಜ್ಯ ನಿಷೇಧ ನಾಮಫಲಕ ಕೆಲವರು ಅಂಗರಗುಡ್ಡೆ ಬಳಿಯ ಗೂಡಂಗಡಿ ಬಾಗಿಲಿಗೆ ಅಳವಡಿಸಿದ್ದಾರೆ ಎಂದು ಶರೀಫ್ ಹೇಳಿದರು. ಇದಕ್ಕೆ ಪಿಡಿಒ ಪೂರ್ಣಿಮಾ ಉತ್ತರಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸದಸ್ಯ ವಿಕಾಸ್ ಶೆಟ್ಟಿ, ದಮಯಂತಿ ಶೆಟ್ಟಿಗಾರ್, ಶಾಂತಾ ಮತ್ತಿತರ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
11/01/2022 06:01 pm