ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮತ್ತೆ ಗರಿಗೆದರಿದೆ ಹಿಜಾಬ್ ವಿವಾದ: ಡಿಸಿ ಕಚೇರಿಯ ಕದ ತಟ್ಟಿದ ಹಿಜಾಬ್ ಧಾರಿ ವಿದ್ಯಾರ್ಥಿನಿಯರು!

ಪಬ್ಲಿಕ್ ನೆಕ್ಸ್ಟ್ ವಿಶೇಷ: ವಿಶ್ವನಾಥ ಪಂಜಿಮೊಗರು

ಮಂಗಳೂರು: ಕೊಂಚ ಕಾಲ ತಣ್ಣಗಿದ್ದ ಹಿಜಾಬ್ ವಿವಾದ ಮತ್ತೆ ಗರಿಗೆದರಿದೆ. ಇಂದು ಏಕಾಏಕಿ ಮಂಗಳೂರಿನ‌ ಯುನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಆದರೆ ಕಾಲೇಜಿನಿಂದ ಸಕಾರಾತ್ಮಕ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ವಿದ್ಯಾರ್ಥಿಯರು ಇದೀಗ ಡಿಸಿ ಕಚೇರಿ ಮೆಟ್ಟಿಲೇರಿದ್ದಾರೆ.

ಕಳೆದ ವರ್ಷದವರೆಗೆ ಯುನಿವರ್ಸಿಟಿ ‌ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿಯೇ ತರಗತಿ ಪ್ರವೇಶಕ್ಕೆ ಅವಕಾಶವಿತ್ತು. ಈ ವಿದ್ಯಾರ್ಥಿಯರು ಹಿಜಾಬ್ ಧರಿಸಿಯೇ ಪರೀಕ್ಷೆಯನ್ನು ಬರೆದಿದ್ದಾರೆ. ಯೂನಿಫಾರ್ಮ್ ಶಾಲ್ ನ ಬಣ್ಣದ ಶಿರವಸ್ತ್ರ ಧರಿಸಬಹುದೆಂದು ಕಾಲೇಜು ಪ್ರಾಸ್ಫೆಕ್ಟ್ ನಲ್ಲಿಯೂ ಉಲ್ಲೇಖವಿದೆ. ಆದರೆ ಈ ಬಾರಿಯ ಸಿಂಡಿಕೇಟ್ ಸಭೆಯಲ್ಲಿ ಯುನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶವಿಲ್ಲವೆಂದು ನಿರ್ಧಾರವಾಗಿತ್ತು. ಈ ಬಗ್ಗೆ ನೋಟಿಸ್ ಬೋರ್ಡ್ ನಲ್ಲಿಯೂ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವಾರಗಳಿಂದ ಕಾಲೇಜಿನ 43 ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿದ್ದಾರೆಂದು ತರಗತಿಗೆ ಅವಕಾಶ ಕೊಟ್ಟಿರಲಿಲ್ಲ. ಅವರು ಕಾಲೇಜು ಲೈಬ್ರರಿಯಲ್ಲಿದ್ದುಕೊಂಡೇ ನೋಟ್ಸ್ ಬರೆಯುತ್ತಿದ್ದರು.

ಈ ನಡುವೆ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಹಿಜಾಬ್ ಗೆ ಅವಕಾಶ ಕೊಡಬೇಕೆಂದು ಮನವಿ‌ ನೀಡಿದ್ದಾರೆ. ಆದರೆ ಪ್ರಾಂಶುಪಾಲರು ಈ ವಿಚಾರದಲ್ಲಿ ಕೈಚೆಲ್ಲಿ, ಡಿಸಿಯತ್ತ ಕೈ ತೋರಿಸಿದ್ದಾರೆ‌. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಡಿಸಿ ಕಚೇರಿಯ ಮೆಟ್ಟಿಲೇರಿದ್ದು, ಡಿಸಿಗೆ ಮನವಿಯನ್ನೂ ಮಾಡಿದ್ದಾರೆ‌‌. ಡಿಸಿ ಸೋಮವಾರ ತಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿ ಗಡುವು ನೀಡಿದ್ದಾರೆ‌.

ಆದರೆ ಇಷ್ಟರವರೆಗೆ ಈ ವಿಚಾರ ಕಾಲೇಜಿನಿಂದ ಹೊರಗೆ ಸುದ್ದಿಯಾಗಿರಲಿಲ್ಲ. ಇಂದು ಕಾಲೇಜಿನ ಇತರ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಈ ವಿಚಾರ ಗಂಭೀರವಾಗಿ ರಾಜ್ಯದ ಗಮನ ಸೆಳೆದಿದೆ. ಇದೀಗ ವಿದ್ಯಾರ್ಥಿಯರು ಎಬಿವಿಪಿ ಷಡ್ಯಂತರ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ತಮ್ಮ ಶಿಕ್ಷಣದ ಹಕ್ಕನ್ನು ಕಸಿಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ರಾಜ್ಯಾದ್ಯಂತ ಗಮನ ಸೆಳೆದಿದ್ದ ಹಿಜಾಬ್ ಗಂಭೀರತೆಯ ಬಿಸಿ ದಕ್ಷಿಣ ಕನ್ನಡ ಜಿಲ್ಲೆಯನ್ನು ತಟ್ಟಿರಲಿಲ್ಲ‌. ಇದೀಗ ಏಕಾಏಕಿ ಮಂಗಳೂರಿನಲ್ಲಿ ಭುಗಿಲೆದ್ದ ವಿವಾದ ಜಿಲ್ಲೆಯನ್ನು ಸಂಕಷ್ಟಕ್ಕೆ ತಳ್ಳಲಿದೆ.

Edited By : Nagesh Gaonkar
PublicNext

PublicNext

26/05/2022 09:53 pm

Cinque Terre

60.69 K

Cinque Terre

11

ಸಂಬಂಧಿತ ಸುದ್ದಿ