ಸುಳ್ಯ:ಸಂಘಟಿತ ಶಕ್ತಿ ಮತ್ತು ಭಕ್ತಿ ಭಾವನೆಯಿಂದ ಎಲ್ಲರೂ ಒಂದಾದಾಗ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಉಳಿಸಿ ಬೆಳೆಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಬಂದರು, ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಹೇಳಿದ್ದಾರೆ. ಅರಂತೋಡು ಗ್ರಾಮದ ತೋಟಂಪಾಡಿ ಉಳ್ಳಾಕುಳು ಮತ್ತು ಪರಿವಾರ ದೈವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಮೇ.13 ರಂದು ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಲವು ಎಲ್ಲವನ್ನೂ ನಿರ್ಣಯಿಸುತ್ತದೆ. ಜನರ ಆಶೀರ್ವಾದ ಮತ್ತು ದೇವರ ಅನುಗ್ರಹ ಇದ್ದಾಗ ಅವಕಾಶಗಳು ದೊರೆಯುತ್ತದೆ. ಅಂತಹಾ ಅವಕಾಶಗಳನ್ನು ಸರಿಯಾಗಿ ಬಳಸಿದರೆ ಯಶಸ್ವಿಯಾಗಬಹುದು ಎಂದು ಅವರು ಹೇಳಿದರು. ಸಚಿವ ಅಂಗಾರ ಅವರ ವಿಶೇಷ ಅನುದಾನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ,ಆವರಣ ಗೋಡೆ ಮತ್ತು ಇಂಟರ್‌ಲಾಕ್ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.
ಧಾರ್ಮಿಕ ಉಪನ್ಯಾಸ:
ಧಾರ್ಮಿಕ ಉಪನ್ಯಾಸ ನೀಡಿದ ಸಾಮಾಜಿಕ ಚಿಂತಕ ಪ್ರಕಾಶ್ ಮಲ್ಪೆ ಮಾತನಾಡಿ ‘ಭಗವಂತನನ್ನು ಕಾಣಲು ಒಳಗಿನ ಕಣ್ಣು ತೆರೆಯಬೇಕು. ಭಕ್ತಿ ಮತ್ತು ನಂಬಿಕೆ ಬೆಳೆದರೆ ಕಲ್ಲಿನಲ್ಲೂ ದೇವರನ್ನು ಕಾಣಲು ಸಾಧ್ಯ ಎಂದರು. ಮಕ್ಕಳಲ್ಲಿ ಭಕ್ತಿ ಮತ್ತು ನಂಬಿಕೆ ಬೆಳೆಸಿದಾಗ ನಾನು ಎಂಬ ಭಾವ ದೂರವಾಗುತ್ತದೆ. ನಾನು ಎಂಬ ಭಾವ ಇಲ್ಲದಾದಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಮಕ್ಕಳಲ್ಲಿ ನಂಬಿಕೆ ಇದ್ದರೆ ಆತ್ಮ ವಿಶ್ವಾಸ ಹೆಚ್ಚುತ್ತದೆ. ಆತ್ಮ ವಿಶ್ವಾಸ ಇದ್ದರೆ ಆ ಮಗು ಬೆಳೆದು ಜಗತ್ತನ್ನು ಗೆಲ್ಲುತ್ತಾನೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸುಳ್ಯ ಎ.ಒ.ಎಲ್.ಇಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ ಮಾತನಾಡಿ ‘ದೈವದ ಶಕ್ತಿ ಮತ್ತು ಅನುಗ್ರಹದಿಂದ ದೈವಸ್ಥಾನದ ಜೀರ್ಣೋದ್ಧಾರ ಅತ್ಯಂತ ಯಶಸ್ವಿಯಾಗಿ ಆಗಿರುವುದು ಸಂತಸ ತಂದಿದೆ ಎಂದು ಹೇಳಿದರು. ತೋಟಂಪಾಡಿ ಉಳ್ಳಾಕುಳು ಮತ್ತು ಪರಿವಾರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಯು.ಎಸ್.ಮೇದಪ್ಪ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ , ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ತೋಟಂಪಾಡಿ ಉಳ್ಳಾಕುಳು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ,ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಎಪಿಎಂಸಿ ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಮರ್ಕಂಜ ಪಂಚಸ್ಥಾಪನೆಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಚ ರಾಘವ ಕಂಜಿಪಿಲಿ,ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ, ವಾಹನ ಮಾಲಕ ಚಾಲಕರ ಸಂಘದ ಅಧ್ಯಕ್ಷ ಮೋಹನ ಪೆರಂಗೋಡಿ ಭಾಗವಹಿಸಿದ್ದರು.
ಸಚಿವ ಎಸ್.ಅಂಗಾರ, ಡಾ.ರೇಣುಕಾಪ್ರಸಾದ್, ಪ್ರಕಾಶ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ಒಂದು ಲಕ್ಷಕ್ಕೂ ಅಧಿಕ ದಾನ ನೀಡಿದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಸಂತೋಷ್ ಕುತ್ತಮೊಟ್ಟೆ, ಹರಿಣಿ ಡಿ, ಪದ್ಮನಾಭ ಕೆ.ಆರ್, ಪುರುಷೋತ್ತಮ ಉಳುವಾರು,ವಿನೋದ್ ಉಳುವಾರು, ಮೋಹನ್ ಪೆರಂಗೋಡಿ ಅವರನ್ನು ಗೌರವಿಸಲಾಯಿತು. ಮೇದಪ್ಪ ಯು.ಎಸ್, ಪ್ರಶಾಂತ್ ಕಲ್ಲುಗುಂಡಿ, ಹರಿಣಿ ಉಳುವಾರು, ಯೋಗೀಶ್ ಉಳುವಾರು, ಜತ್ತಪ್ಪ ಗೌಡ ಮತ್ತಿತರರು ಸೇರಿ, ಭೂಮಿ ದಾನ ಮಾಡಿದ ಹಾಗು ಧನ ಸಹಾಯ ನೀಡಿದವರನ್ನು ಸನ್ಮಾನಿಸಲಾಯಿತು. ಪುಷ್ಪಾ ಮೇದಪ್ಪ ಪ್ರಾರ್ಥಿಸಿದರು, ಕಿಶೋರ್ ಕುಮಾರ್ ಉಳುವಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಕುಕ್ಕುಂಬಳ ವಂದಿಸಿದರು. ಜಯಪ್ರಕಾಶ್, ಸವಿತಾ, ರಮೇಶ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಇವರ ನಿರ್ದೇಶನದಲ್ಲಿ ಶ್ರೀ ಮೂಕಾಂಬಿಕಾ ಕಲ್ವರಲ್ ಅಕಾಡೆಮಿ ಪುತ್ತೂರು ಇವರಿಂದ ನೃತ್ಯರೂಪಕ ಮತ್ತು ನೃತ್ಯ ವೈವಿಧ್ಯ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Kshetra Samachara
14/05/2022 10:41 pm