ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್, ನಳೀನ್ ವಿರುದ್ಧ ಭುಗಿಲೆದ್ದ ಆಕ್ರೋಶ, ಕಾರಿನ ಮೇಲೆ ಕಲ್ಲು, ಹೆಲ್ಮೆಟ್ ಎಸೆತ..!

ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಶವ ಮೆರವಣಿಗೆ ಕೊನೆಗೆ ರಾಜಕೀಯ ನಾಯಕರ ವಿರುದ್ಧ ಕಾರ್ಯಕರ್ತರೇ ತಿರುಗಿ ಬೀಳುವಂತಾಗಿತ್ತು. ಬೆಳ್ಳಾರೆಯಲ್ಲಿ ಶವದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸೇರಿದ್ದ ಸಾವಿರಾರು ಜನರು ಅಂತಿಮ ದರ್ಶನ ಪಡೆಯುತ್ತಿದ್ದರು.

ಇಷ್ಟರಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸ್ಥಳಕ್ಕೆ ಬಂದಿದ್ದಾರೆ. ರಾಜಕೀಯ ನಾಯಕರನ್ನು ನೋಡುತ್ತಲೇ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಬಿಜೆಪಿ ಸರಕಾರ, ನಳಿನ್ ಕುಮಾರ್ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದ್ದಾರೆ. ಕೆಲ ಹೊತ್ತಿನಲ್ಲಿಯೇ ಧಿಕ್ಕಾರದ ಕೂಗು ಮಾರ್ದನಿಸಿದ್ದು ಎಲ್ಲರ ಕೂಗು ಒಂದೇ ಆಗಿತ್ತು. ಹಿಂದು ಸಂಘಟನೆ ನಾಯಕರು ಏನೇ ಮನವೊಲಿಸಲು ಯತ್ನಿಸಿದರೂ ಜನರು ಸೌಮ್ಯವಾಗಲಿಲ್ಲ. ಮತ್ತಷ್ಟು ಧಿಕ್ಕಾರ, ನಿಂದನೆಯ ಕೂಗು ಕೇಳಿಬಂತು. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.

ಕಲ್ಲಡ್ಕ ಪ್ರಭಾಕರ ಭಟ್ ಮೈಕ್ ಪಡೆದು ಎಲ್ಲರೂ ಶಾಂತವಾಗಿರಬೇಕು ಎಂದು ಎಂದಿನ ಶೈಲಿಯಲ್ಲಿ ಸೂಚನಾ ಪದಗಳನ್ನು ಹೇಳಲು ತೊಡಗಿದರು. ಆದರೆ ಕಲ್ಲಡ್ಕ ಭಟ್ ವಿರುದ್ಧವೇ ಜನರ ಆಕ್ರೋಶ ತಿರುಗಿತು. ಒಂದೆಡೆ ಮೋದಿ ಮೋದಿ ಘೋಷಣೆ, ಇನ್ನೊಂದೆಡೆ ನಳಿನ್ ಗೆ ಧಿಕ್ಕಾರ, ಬಿಜೆಪಿ ಸರಕಾರಕ್ಕೆ ಧಿಕ್ಕಾರ ಹಾಕಿದರು. ಜನರ ಭುಗಿಲೆದ್ದ ಆಕ್ರೋಶ ಇನ್ನೇನು ಹಲ್ಲೆ, ದೊಂಬಿಗೆ ಕಾರಣವಾಗುತ್ತದೆ ಎನ್ನುವ ಸುಳಿವು ಸಿಗುತ್ತಲೇ ಶರಣ್ ಪಂಪ್ವೆಲ್ ಸೇರಿ ಕೆಲವು ಮಂಗಳೂರು ಮೂಲದ ಕಾರ್ಯಕರ್ತರು ಕಲ್ಲಡ್ಕ ಭಟ್ ರನ್ನು ದೂಡಿಕೊಂಡೇ ಹೊರಕ್ಕೆ ಕರೆತಂದರು. ವಿರೋಧಿ ಘೋಷಣೆ, ನಿಂದನೆಗಳ ಮಧ್ಯೆ ಬೇರೊಂದು ಕಾರಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಸ್ಥಳದಿಂದ ಕಾಲ್ಕಿತ್ತರು.

ಇದೇ ವೇಳೆ, ಒಂದು ಮೂಲೆಯಲ್ಲಿ ತಮ್ಮ ಆಪ್ತರ ಜೊತೆಗೆ ಕುಳಿತಿದ್ದ ನಳಿನ್ ಕುಮಾರ್ ಮತ್ತು ಸುನಿಲ್ ಅವರ ಮೇಲೆ ಹಲ್ಲೆ ಮಾಡುತ್ತಾರೆಯೋ ಎನ್ನುವಂತೆ ಗುಂಪು ಕೂಡಿದರು. ಸುತ್ತ ನಿಂತಿದ್ದವರನ್ನು ತಳ್ಳಿಕೊಂಡೇ ಬಂದು ಇಬ್ಬರು ನಾಯಕರನ್ನು ಗುರಿಯಾಗಿಸಿ ಆಕ್ರೋಶ ಹೊರಹಾಕಿದರು. ಶರಣ್ ಪಂಪ್ವೆಲ್ ಸಮಾಧಾನ ಮಾಡಲು ಯತ್ನಿಸಿದರೂ ಕೇಳಲಿಲ್ಲ. ಕಳ್ಳ, ಸುಳ್ಳ, ಪಾಪದ ಕಾರ್ಯಕರ್ತರ ಹೆಸರಿನಲ್ಲಿ ನೀನು ಗೆದ್ದು ಹಣ ಮಾಡಿದ್ದೀಯ.. ನಿನಗೆ ನಾಚಿಕೆ ಆಗಲ್ವಾ.. ನಾಯಿ ಹೀಗೆ ತುಳುವಿನಲ್ಲಿ ಅವಾಚ್ಯ ಶಬ್ದಗಳ ನಿಂದನೆಯೇ ಕೇಳಿಬಂತು. ಜನರು ವಿರೋಧಿ ಘೋಷಣೆ ಕೇಳುತ್ತಲೇ ಇತ್ತು.

ಇದೇ ವೇಳೆ, ನಳಿನ್ ಕುಮಾರ್ ಕಾರಿನ ಟೈರ್ ಪಂಚರ್ ಮಾಡಲು ಯತ್ನ ನಡೆಯಿತು. ಪೊಲೀಸರು ಸುತ್ತುವರಿದು ನಿಂತರೂ ಕಾರ್ಯಕರ್ತರ ಆಕ್ರೋಶದ ಮಧ್ಯೆ ಏನೂ ಮಾಡುವಂತಿರಲಿಲ್ಲ. ನೀವೆಲ್ಲ ಕೈಲಾಗದವರು. ಹಿಂದು ಕಾರ್ಯಕರ್ತರು ಸಾಯುತ್ತಿದ್ದಾರೆ. ಬಿಜೆಪಿ ಸರಕಾರ ಇದ್ದರೇನು, ಇಲ್ಲದಿದ್ದರೇನು..? ನಿಮ್ಮಂಥವರು ಆಡಳಿತದಲ್ಲಿ ಇರಬೇಕಾ..? ಚುನಾವಣೆ ಬರಲಿ. ನಿಮಗೆಲ್ಲ ಬುದ್ಧಿ ಕಲಿಸುತ್ತೇವೆ. ಇಲ್ಲೊಬ್ಬ ಶಾಸಕ ಆರು ಬಾರಿ ಗೆದ್ದು ಬಂದಿದ್ದಾರೆ. ಆದರೆ ಹಿಂದೂಗಳ ಹಿತ ಕಾಯಲು ಸಾಧ್ಯ ಆಗಿಲ್ಲ. ಇವತ್ತು ಸ್ಥಳಕ್ಕೇ ಬಂದಿಲ್ಲ. ನೀವೆಲ್ಲ ನರಸತ್ತವರು ಎಂದು ಹೇಳಿ ಮಹಿಳೆಯರು, ಯುವಕರು ಆಕ್ರೋಶ ಹೊರಹಾಕಿದ್ದಾರೆ.

Edited By : Shivu K
Kshetra Samachara

Kshetra Samachara

28/07/2022 09:31 am

Cinque Terre

17.74 K

Cinque Terre

1

ಸಂಬಂಧಿತ ಸುದ್ದಿ