ಬೆಳ್ತಂಗಡಿ: ಬಿಜೆಪಿ ಮುಖಂಡನ ಮರಗಳ್ಳತನ ಭೇದಿಸಿದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡುವ ಮೂಲಕ ಹಗೆತನ ಸಾಧಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಬೆಳ್ತಂಗಡಿಯ ಪ್ರತಿಷ್ಠಿತ ನೂಜೋಡಿ ಮನೆತನದ ಸೊಸೆ ಸಂಧ್ಯಾ, ಉಡುಪಿ ಅರಣ್ಯ ಸಂಚಾರಿ ದಳದ ಅಧಿಕಾರಿಯಾಗಿದ್ದರು. ಮಂಗಳೂರು ಅರಣ್ಯ ಸಂಚಾರಿ ದಳದ ಪ್ರಭಾರ ಅಧಿಕಾರಿಯೂ ಕಾರ್ಯನಿರ್ವಹಿಸುತ್ತಿದ್ದರು. 2 ತಿಂಗಳ ಹಿಂದೆ ಬೆಳ್ತಂಗಡಿಯ ಕಲ್ಮಂಜ ಗ್ರಾಮದಲ್ಲಿ ಅನುಮತಿ ಇಲ್ಲದೆ ಕೋಟ್ಯಂತರ ಮೌಲ್ಯದ ಮರಗಳನ್ನು ಪಂಚಮುಖಿ ಬಾಲಕೃಷ್ಣ ಶೆಟ್ಟಿ ಎಂಬಾತ ಕಡಿದುರುಳಿಸಿದ್ದ!
ಸ್ಥಳೀಯರ ದೂರಿನಂತೆ ತನ್ನ ತಂಡದೊಂದಿಗೆ ದಾಳಿ ನಡೆಸಿದಾಗ ಹೆಬ್ಬಲಸು, ಹಲಸು, ಬೋಗಿ, ಕಿರಲ್ ಬೋಗಿ, ಸಾಗುವಾನಿ ಸಹಿತ ಬೆಲೆಬಾಳುವ ಮರಗಳನ್ನು ಕಡಿದು ಹಾಕಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿದ ಅರಣ್ಯಾಧಿಕಾರಿ ಸಂಧ್ಯಾ, ಸ್ಥಳದಲ್ಲಿದ್ದ ವಾಹನಗಳ ಸಮೇತ ಮರಗಳನ್ನು ಮುಟ್ಟುಗೋಲು ಹಾಕಿಕೊಂಡರು. ಇದರಿಂದ ಕಂಗೆಟ್ಟ ಶಾಸಕ ಹರೀಶ್ ಪೂಂಜ, ಈ ಮಹಿಳಾ ಅಧಿಕಾರಿಯನ್ನು ಬೀದರ್ ಜಿಲ್ಲೆಗೆ ವರ್ಗಾಯಿಸಲು ಯಶಸ್ವಿಯಾಗಿದ್ದಾರೆ. ಸ್ವತಃ ತಾನೇ ಮುಂದೆ ನಿಂತು ಸಿಎಂ ಬಸವರಾಜ್ ಬೊಮ್ಮಾಯಿ ಮೂಲಕ ವರ್ಗಾವಣೆ ಮಾಡಲಾಗಿದೆ.
ಈ ಸಂಬಂಧ ಶಾಸಕ ಹರೀಶ್ ಪೂಂಜ, ಸಿಎಂಗೆ ಬರೆದ ಪತ್ರ ಹಾಗೂ ಸಿಎಂ ಆದೇಶ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಮಧ್ಯೆ ಅಧಿಕಾರಿ ಸಂಧ್ಯಾ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಿದ ಬಗ್ಗೆ ನ್ಯಾಯ ಕೋರಿ ಬಿಲ್ಲವ ಸಂಘಕ್ಕೆ ದೂರು ನೀಡಿದ್ದಾರೆ. ಈ ಪತ್ರವೂ ವೈರಲ್ ಆಗಿದೆ.
PublicNext
29/01/2022 04:34 pm