ಉಳ್ಳಾಲ: ಬೆಂಗಳೂರು, ಶಿವಮೊಗ್ಗ, ಮಂಗಳೂರು ಸೇರಿ ರಾಜ್ಯದ ಹಲವೆಡೆ ಸಾವರ್ಕರ್ ಪರವಾಗಿ ಫ್ಲೆಕ್ಸ್ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಹಾಕಿದರೆ, ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಅದನ್ನು ತೆರವು ಮಾಡಿ ಕಿಚ್ಚು ಹೊತ್ತಿಕೊಳ್ಳುವಂತೆ ಮಾಡಿದ್ದಾರೆ. ಆದರೆ ಕೋಮು ಸೂಕ್ಷ್ಮ ಪ್ರದೇಶ ಉಳ್ಳಾಲದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಲ್ಲಿ ಗುರುತಿಸಿಕೊಂಡಿರುವ ಮುಸ್ಲಿಂ ಮುಖಂಡರೊಬ್ಬರು ಬಹಿರಂಗವಾಗಿಯೇ ಸಾವರ್ಕರ್ ಪರವಾಗಿ ಫ್ಲೆಕ್ಸ್ ಹಾಕಿದ್ದಾರೆ.
ಶಾಸಕ ಯುಟಿ ಖಾದರ್ ಪ್ರತಿನಿಧಿಸುತ್ತಿರುವ ಮುಸ್ಲಿಂ ಬಾಹುಳ್ಯದ ಮಂಗಳೂರು ವಿಧಾನಸಭಾ ಕ್ಷೇತ್ರದ ಎರಡು ಕಡೆ ಸಾವರ್ಕರ್ ಪರವಾಗಿ ಫ್ಲೆಕ್ಸ್ ಹಾಕಲಾಗಿದೆ. ದೇರಳಕಟ್ಟೆ ಮತ್ತು ಅಸೈಗೋಳಿಯಲ್ಲಿ ಬೃಹತ್ ಪೋಸ್ಟರ್ ಹಾಕಿದ್ದು, ಸಾವರ್ಕರ್ ಅವರಿಗೆ ನಮನಗಳು ಎಂದು ಬರೆದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎ.ಆರ್. ಫಝಲ್ ಅವರು ಫ್ಲೆಕ್ಸ್ ಹಾಕಿದ್ದಾರೆ. ದೇರಳಕಟ್ಟೆ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದ್ದರೆ, ಅಸೈಗೋಳಿಯಲ್ಲಿ ಎರಡೂ ಸಮುದಾಯದ ಜನರು ಇದ್ದಾರೆ. ಗುರುವಾರ ಸಂಜೆ ಹೊತ್ತಿಗೆ ಎರಡೂ ಕಡೆ ಫ್ಲೆಕ್ಸ್ ಕಂಡುಬಂದಿದ್ದು ಕೆಲವರಿಂದ ವಿರೋಧವೂ ವ್ಯಕ್ತವಾಗಿದೆ.
ಫ್ಲೆಕ್ಸ್ ಹಾಕಿದ ಅರ್ಧ ಗಂಟೆಯಲ್ಲೇ ಕೊಣಾಜೆ ಪೊಲೀಸರು ದೇರಳಕಟ್ಟೆಯಲ್ಲಿ ಹಾಕಿದ್ದ ಫ್ಲೆಕ್ಸನ್ನು ತೆರವು ಮಾಡಿದ್ದಾರೆ. ದೇರಳಕಟ್ಟೆ ಮುಸ್ಲಿಂ ಬಾಹುಳ್ಯದ ಪ್ರದೇಶ ಆಗಿರುವುದರಿಂದ ಘರ್ಷಣೆಗೆ ಅವಕಾಶ ಮಾಡಿಕೊಡುವುದು ಬೇಡವೆಂದು ಪೊಲೀಸರೇ ತೆರವು ಕಾರ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಪೊಲೀಸರೇ ಫ್ಲೆಕ್ಸ್ ತೆರವು ಮಾಡಿರುವುದು ಬಿಜೆಪಿ ಮುಖಂಡರನ್ನು ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಜಲ್, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್ ಅವರಿಗೆ ನಮನ ಸಲ್ಲಿಸುವುದರಲ್ಲಿ ತಪ್ಪೇನಿದೆ. ನಾನು ಭಯೋತ್ಪಾದಕರ ಪರವಾಗಿ ಫ್ಲೆಕ್ಸ್ ಹಾಕಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಒಂದು ದಿವಸ ಆಗಿರಲಿ, 50 ವರ್ಷ ಆಗಿರಲಿ, ಹೋರಾಟ ಮಾಡಿದವರೆಲ್ಲರೂ ಶ್ರೇಷ್ಟರು. ಅಂತಹ ವ್ಯಕ್ತಿಗಳಿಗೆ ಅವಮಾನ ಮಾಡುವುದು ಸರಿಯಲ್ಲ. ಕೊಣಾಜೆ ಪೊಲೀಸ್ ಅಧಿಕಾರಿಗಳು ಎಸ್ಡಿಪಿಐ ಕಾರ್ಯಕರ್ತರ ರೀತಿ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
18/08/2022 11:08 pm