ಮಂಗಳೂರು: ಕೈಗಾರಿಕಾ ಪ್ರದೇಶಗಳ ಬೆಳವಣಿಗೆಗೆ ಹಾಗೂ ಅಡ್ಡಿಯಾಗುತ್ತಿರುವ ಉದ್ಯಮಗಳ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಣಾಯಕ ಮತ್ತು ಕಾಲಮಿತಿಯೊಳಗೆ ಸಮಸ್ಯೆಗಳನ್ನು ಪರಿಹರಿಸಲು ದ.ಕ.ಜಿಲ್ಲಾ ಉದ್ಯಮಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಬೆಂಗಳೂರಿಗೆ ಆಹ್ವಾನಿಸಿದ್ದಾರೆ.
ನಗರದಲ್ಲಿ ಕೆನರಾ ಕೈಗಾರಿಕಾ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗುತ್ತದೆ. ಕಳಪೆಮಟ್ಟದಲ್ಲಿ ಚರಂಡಿ ಕಾಮಗಾರಿ ಹಾಗೂ ನಿರ್ವಹಣೆಯಿಂದ ಕಚ್ಚಾವಸ್ತು ಮತ್ತು ಸಿದ್ಧಪಡಿಸಿದ ವಸ್ತುಗಳಿಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಈ ಬಗ್ಗೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತಂದು ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ 50 ವರ್ಷಕ್ಕಿಂತ ಹಳೆಯ ನೀರಿನ ಪೈಪ್ ಲೈನ್ ಇವೆ. ಅವುಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕು. ಬೈಕಂಪಾಡಿಯಲ್ಲಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಮತ್ತು ಒಳಚರಂಡಿ ಸಂಸ್ಕರಣಾ ಘಟಕ, ಭೂಗತ ವಿದ್ಯುತ್ ಮಾರ್ಗಗಳು ಮತ್ತು 24x7 ಕೇಂದ್ರೀಕೃತ ಮೆಸ್ಕಾಂ ಸೇವಾ ಕೇಂದ್ರವನ್ನು ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಲು ಜಿಲ್ಲಾಡಳಿತಕ್ಕೆ ಸಲಹೆ ನೀಡಬೇಕೆಂದು ಸೂಚಿಸಿದರು.
Kshetra Samachara
14/06/2022 12:13 pm