ಉಡುಪಿ: ಎಂಟ್ಹತ್ತು ತಿಂಗಳುಗಳ ಬಳಿಕ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಕಾಣಿಸಿಕೊಂಡಿದ್ದು ಕಾರ್ಯಕರ್ತರಲ್ಲಿ ಸಂಚಲನಕ್ಕೆ ಕಾರಣವಾಯಿತು. ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಭೆಯನ್ನು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿತ್ತು.
ಕಳೆದ ಹಲವಾರು ಸಭೆ ,ಕಾರ್ಯಕ್ರಮಗಳಿಗೆ ಗೈರು ಹಾಜರಾಗುತ್ತಿದ್ದ ಪ್ರಮೋದ್ ಮಧ್ವರಾಜ್ ಈ ಸಭೆಗೆ ಹಾಜರಾಗುತ್ತಾರಾ ಎಂಬ ಕುತೂಹಲ ಇತ್ತು. ಅದೂ ಅಲ್ಲದೆ 4 ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉಡುಪಿಗೆ ಆಗಮಿಸಿದ್ದಾಗಲೂ ಪ್ರಮೋದ್ ಮಧ್ವರಾಜ್ ಗೈರುಹಾಜರಾಗಿದ್ದರು.
ಹೀಗಾಗಿ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಸಭೆಗೆ ಪ್ರಮೋದ್ ಮಧ್ವರಾಜ್ ಬರುತ್ತಾರೋ ಇಲ್ಲವೋ ಎಂಬ ಕುತೂಹಲ ಎಲ್ಲರಲ್ಲಿತ್ತು.ಸಭೆಗೆ ದಿಢೀರ್ ಆಗಮಿಸಿದ ಪ್ರಮೋದ್ ಮಧ್ವರಾಜ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಕರತಾಡನದ ಮೂಲಕ ಸ್ವಾಗತಿಸಿದರು.
ಸಭೆಯಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್ ಕಾರ್ಯಕರ್ತರನ್ನು ನಾನು ಸ್ವಲ್ಪ ನಿರ್ಲಕ್ಷ ಮಾಡಿದ್ದು ನಿಜ. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಬಲವಾಗಿ ಕಟ್ಟಲು ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ.
ಮುಖ್ಯವಾಗಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಬಿಜೆಪಿಯನ್ನು ಸೋಲಿಸುವುದು ಕಷ್ಟವೇನಲ್ಲ.
ಎಲ್ಲ ಕಡೆಗಳಲ್ಲೂ ಅರ್ಹ ಸೂಕ್ತ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿಲ್ಲಿಸಬೇಕು. ಮನೆಮನೆಗೆ ತೆರಳಿ ಕಾರ್ಯಕರ್ತರು ನಮ್ಮ ಕಾರ್ಯಕ್ರಮಗಳನ್ನು ತಿಳಿಸಬೇಕು, ಈ ಮೂಲಕ ಪಂಚಾಯತ್ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಹೇಳಿದರು.
ಆದರೆ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮೊದಲಾದ ನಾಯಕರು ಗೈರುಹಾಜರಾಗಿದ್ದರು.
ಹಲವು ತಿಂಗಳುಗಳಿಂದ ಪ್ರಮೋದ್ ಮಧ್ವರಾಜ್ ಮತ್ತು ಹಿರಿಯ ಮುಖಂಡರ ನಡುವೆ ಶೀತಲ ಸಮರ ನಡೆಯುತ್ತಿತ್ತು. ಕಾರ್ಯಕರ್ತರು ಕೂಡ ಗೊಂದಲದಲ್ಲಿದ್ದರು. ಆದರೆ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಗೆ ಆಗಮಿಸಿದ ಪ್ರಮೋದ್ ಮಧ್ವರಾಜ್ ಕಾರ್ಯಕರ್ತರಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
Kshetra Samachara
07/12/2020 12:29 pm