ಮೂಡುಬಿದಿರೆ : ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅರ್ಚಕರ ವಿಚಾರದಲ್ಲಿ ಯಾವುದೇ ವಿವಾದವಾಗಲಾಗಿಲ್ಲ. ಆದರೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರದಿಂದ ಅರ್ಚಕರ ಬದಲಾವಣೆಗೆ ಮುಂದಾಗಿರುವುದು ಗೊಂದಲಕ್ಕೆ ಕಾರಣ ಎಂದು ಜಿಪಂ ಸದಸ್ಯ, ಗ್ರಾಮಸ್ಥ ಕೆ.ಪಿ ಸುಚರಿತ ಶೆಟ್ಟಿ ಹಾಗೂ ನಾಲ್ಕು ಮಂದಿ ವ್ಯವಸ್ಥಾಪನ ಸಮಿತಿ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಗುರುವಾರ ಸ್ಪಷ್ಟೀಕರಣ ನೀಡಿದದ್ದಾರೆ.
ದೇವಸ್ಥಾನದ ಗರ್ಭಗುಡಿಗೆ ಅರ್ಚಕರಿಂದ ಬೀಗ ಹಾಕಲಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.ದೇವಳದ ಗರ್ಭಗುಡಿಗೆ ಭದ್ರತೆಯ ಹಿತದೃಷ್ಟಿಯಿಂದ ಈ ಹಿಂದಿನಿಂದಲೂ ಬೀಗ ಹಾಕಲಾಗುತ್ತಿದೆ.
ಕಳೆದ ಮಂಗಳವಾರ ಸಮಿತಿಯ ಅಧ್ಯಕ್ಷರು ಮತ್ತು ಇತರ ಇಬ್ಬರು ಸದಸ್ಯರು ಸೇರಿಕೊಂಡು ಗೊತ್ತು ಪರಿಚಯವಿಲ್ಲದ ಪರವೂರಿನ ಅರ್ಚಕರೊಬ್ಬರನ್ನು ಕರೆಸಿ ಪೂಜೆಗೆ ನೇಮಕಗೊಳಿಸಿದ್ದಾರೆ.
ಈ ವೇಳೆ ಸರತಿ ಸಾಲಿನ ಅರ್ಚಕ ಸನತ್ ಭಟ್ ಪೂಜೆ ಬಿಟ್ಟು ಕೊಡದೆ, ಪೂಜೆಯನ್ನು ನಿಲ್ಲಿಸದೆಯೂ ನಡೆದುಕೊಂಡಿದ್ದಾರೆ. ಸಮಿತಿಯ ಅಧ್ಯಕ್ಷ ವಾಸುದೇವ ರಾವ್ ಸತತ 9 ತಿಂಗಳಿನಿಂದ ಸಭೆ ಕರೆದಿಲ್ಲ. ಅರ್ಚಕರ ಬದಲಾವಣೆಯ ವಿಚಾರದಲ್ಲೂ ಸದಸ್ಯರ್ಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.
ಕಡಂದಲೆಯ ಒಂದೇ ಕುಟುಂಬದ ಆರು ಮನೆಯವರಿಗೆ ಪೂಜೆಯ ಆನುವಂಶಿಯತೆ ಇದೆ. ಹೊರಗಿನ ಅರ್ಚಕರನ್ನು ನೇಮಿಸಿದರೆ ಭಕ್ತರು ಗಲಾಟೆ ಮಾಡಬಹುದೆನ್ನುವ ಕಾರಣದಿಂದ ಪ್ರಸ್ತುತ ಸನತ್ ಭಟ್ ಅವರೇ ಪೂಜೆ ಮುಂದುವರಿಸಿದ್ದಾರೆ.
ಅದೂ ಅಲ್ಲದೆ ಹೊಸ ಅರ್ಚಕರಿಗೆ ಧಾರ್ಮಿಕ ವಿಧಿವಿದಾನ ತಿಳಿದಿರುವ ಸಾಧ್ಯತೆ ಕಡಿಮೆ ಇರುವುದರಿಂದ ಷಷ್ಠಿ ಬಳಿಕ ಹೊಸ ಅರ್ಚಕರನ್ನು ನೇಮಿಸಿಕೊಳ್ಳಲಿ ಎಂದು ಸುಚರಿತ ಶೆಟ್ಟಿ ಹೇಳಿದರು.
ಸಮಿತಿಯ ಸದಸ್ಯ ಕೆ.ಸುಬ್ಬಯ್ಯ ಶೆಟ್ಟಿ ಮಾತನಾಡಿ, ಕ್ಷೇತ್ರದ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಬಾರದು ಮತ್ತು ಕ್ಷೇತ್ರದ ಪವಿತ್ರತೆಯನ್ನು ಕಾಪಾಡುವ ಉದ್ದೇಶ ನಮಗಿದೆ.
ಈಗಾಗಿ ಈ ರೀತಿ ಮಾಡಲಾಗಿದೆ. ಷಷ್ಠಿ ಜಾತ್ರಾ ಮಹೋತ್ಸವ ಯಾವುದೇ ಕುಂದುಕೊರತೆಯಾಗದಂತೆ ನೆರವೇರಲು ಊರವರ ಮತ್ತು ಭಕ್ತರ ನೆರವು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ ತಾರಾನಾಥ ಶೆಟ್ಟಿ, ಕೆ.ವಸಂತ ಪೂಜಾರಿ ಮತ್ತು ಅರ್ಚಕ ಸನತ್ ಎಸ್.ಭಟ್ ಉಪಸ್ಥಿತರಿದ್ದರು.
Kshetra Samachara
03/12/2020 07:04 pm